ಐಪಿಎಲ್ 2020- ಡೆಲ್ಲಿ ಕ್ಯಾಪಿಟಲ್ಸ್ ಗೆ ಜಯ.. ಸೋತ್ರೂ ಪ್ಲೇ ಆಫ್ ಗೆ ಎಂಟ್ರಿ ಪಡೆದ ಆರ್ ಸಿಬಿ
ಅಂತೂ ಇಂತೂ ಕಷ್ಟಪಟ್ಟು ನಮ್ಮ ಆರ್ ಸಿಬಿ ತಂಡ 2020ರ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ.
ಆದ್ರೆ ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಆರು ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದೆ. ಆದ್ರೂ ರನ್ ಧಾರಣೆಯ ಆಧಾರದಲ್ಲಿ ಸದ್ಯ ಆರ್ ಸಿಬಿ ಮೂರನೇ ಸ್ಥಾನದಲ್ಲಿದೆ.
ಇನ್ನೊಂದೆಡೆ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳಿದೆ. ಪರಿಣಾಮ ಟೂರ್ನಿಯಲ್ಲಿ ಎಂಟು ಗೆಲುವು ದಾಖಲಿಸಿಕೊಂಡು ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಟಾಸ್ ಸೋತ ಆರ್ ಸಿಬಿ ಗೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತ್ತು.
ಆದ್ರೆ ಆರ್ ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಜೋಶ್ ಫಿಲಿಪ್ಪೆ ಅವರು 13 ರನ್ ಗೆ ಸೀಮಿತವಾದ್ರು.
ಹಾಗೇ ನಾಯಕ ವಿರಾಟ್ ಕೊಹ್ಲಿ ಅಬ್ಬರ 29 ರನ್ ಗೆ ಕೊನೆಗೊಂಡಿತ್ತು.
ಇನ್ನೊಂದೆಡೆ ದೇವದತ್ತ್ ಪಡಿಕ್ಕಲ್ ಆಕರ್ಷಕ 50 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಇನ್ನೊಂದೆಡೆ ಅಪಾಯಕಾರಿ ಎಬಿಡಿ ವಿಲಿಯರ್ಸ್ 21 ಎಸೆತಗಳಲ್ಲಿ 35 ರನ್ ದಾಖಲಿಸಿ ತಂಡದ ಮೊತ್ತವನ್ನು 150ರ ಗಡಿ ಸಮೀಪಿಸಿದ್ರು.
ಅಂತಿಮವಾಗಿ ಆರ್ ಸಿಬಿ ತಂಡ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗೆ 152 ರನ್ ದಾಖಲಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆನ್ರಿಚ್ ನೊರ್ಟೆಜ್ ಅವರು ಮೂರು ವಿಕೆಟ್ ಪಡೆದರು. ಹಾಗೇ ಆರ್. ಅಶ್ವಿನ್ ಒಂದು ವಿಕೆಟ್ ಪಡೆದ್ರೆ, ಕಾಗಿಸೊ ರಬಾಡ ಎರಡು ವಿಕೆಟ್ ಉರುಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಗೆ ಶಿಖರ್ ಧವನ್ ಮತ್ತು ಪೃಥ್ವಿ ಶಾ ಅವರು ಉತ್ತಮ ಆರಂಭ ನೀಡುವ ಸೂಚನೆ ನೀಡಿದ್ರು.
ಈ ಹಂತದಲ್ಲಿ ಪೃಥ್ವಿ ಶಾ 9 ರನ್ ಗೆ ಮಹಮ್ಮದ್ ಸಿರಾಜ್ ಬೌಲ್ಡಾದ್ರು.
ನಂತರ ಶಿಖರ್ ಧವನ್ ಜೊತೆ ಸೇರಿಕೊಂಡ ಅಜ್ಯಂಕ್ಯಾ ರಹಾನೆ ಎರಡನೇ ವಿಕೆಟ್‍ಗೆ 88 ರನ್ ಗಳನ್ನು ಕಲೆ ಹಾಕಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ರು.
ಶಿಖರ್ ಧವನ್ 41 ಎಸೆತಗಳಲ್ಲಿ ಆರು ಬೌಂಡರಿಗಳ ಸಹಾಯದಿಂದ 54 ರನ್ ದಾಖಲಿಸಿದ್ರು.
ಬಳಿಕ ಶ್ರೇಯಸ್ ಅಯ್ಯರ್ ಕೇವಲ ಏಳು ರನ್ ಗಳಿಸಿ ಮತ್ತೆ ನಿರಾಸೆ ಅನುಭವಿಸಿದ್ರು.
ಆದ್ರೆ ಬಂಡೆಯಂತೆ ಕ್ರೀಸ್‍ಗೆ ಅಂಟಿಕೊಂಡಿದ್ದ ಅಜ್ಯಂಕ್ಯಾ ರಹಾನೆ 46 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ 60 ರನ್ ಗಳಿಸಿ ತಂಡದ ಗೆಲುವಿನ ರೂವಾರಿಯಾದ್ರು.
ರಿಷಬ್ ಪಂತ್ ಅಜೇಯ ಎಂಟು ರನ್ ಸಿಡಿಸಿದ್ರೆ, ಮಾರ್ಕಸ್ ಸ್ಟೋನಿಸ್ ಅಜೇಯ 10 ರನ್ ಗಳಿಸಿದ್ರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು.
ಆರ್ ಸಿಬಿ ಬ್ಯಾಟ್ಸ್ ಮೆನ್ ಗಳಿಗೆ ಕಂಟಕವಾಗಿ ಪರಿಣಮಿಸಿದ ಆನ್ರಿಚ್ ನೊರ್ಟೆಜ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.