ಟೀಮ್ ಇಂಡಿಯಾದ ದೇವ್ರಿಗೆ “ಸೂರ್ಯ” ನಮಸ್ಕಾರ..! ಆದ್ರೂ ಯಾರದ್ದು ಸರಿ.. ಯಾರದ್ದು ತಪ್ಪು..?
ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಮುಂಬೈ ಇಂಡಿಯನ್ಸ್ ನ ಸ್ಟಾರ್ ಬ್ಯಾಟ್ಸ್ ಮೆನ್ ಸೂರ್ಯಕುಮಾರ್ ಯಾದವ್ ನಡುವಿನ ವಾಗ್ವಾದ ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಆರ್ ಸಿಬಿ ಸವಾಲಿಗೆ ಮುಂಬೈ ಇಂಡಿಯನ್ಸ್ ತಂಡದ ಸೂರ್ಯ ಕುಮಾರ್ ಯಾದವ್ ದಿಟ್ಟ ಉತ್ತರವನ್ನು ನೀಡುತ್ತಿದ್ದರು. 13ನೇ ಓವರ್ ನಲ್ಲಿ ಸೂರ್ಯ ಕುಮಾರ್ ಯಾದವ್ ತನ್ನ ನೆಚ್ಚಿನ ಶಾಟ್ಸ್ ಅನ್ನು ಹೊಡೆದ್ರು. ಅದನ್ನು ವಿರಾಟ್ ಕೊಹ್ಲಿ ಆರಾಮವಾಗಿ ತಡೆದುಬಿಟ್ಟಿದ್ದರು. ಆಗ ಸೂರ್ಯಕುಮಾರ್ ಯಾದವ್ ತನ್ನ ಹೊಡೆತದ ಶೈಲಿಯನ್ನು ದಿಟ್ಟವಾಗಿ ನೋಡುತ್ತಿದ್ದರು.
ಆಗ ವಿರಾಟ್ ಕೊಹ್ಲಿ ಚೆಂಡನ್ನು ಕೈಯಲ್ಲಿ ಹಿಡಿದುಕೊಂಡು ಸೀದಾ ಸೂರ್ಯ ಕುಮಾರ್ ಯಾದವ್ ಬಳಿ ಬಂದಿದ್ದರು. ಮನಸಲ್ಲೇ ಬೈದಾಡಿಕೊಂಡಿದ್ದ ವಿರಾಟ್ ಕೊಹ್ಲಿಯವರನ್ನು ಸೂರ್ಯಕುಮಾರ್ ಯಾದವ್ ಕೂಡ ದಿಟ್ಟಿಸಿ ನೋಡುತ್ತಿದ್ದರು. ವಿರಾಟ್ ಏನೇ ಅಂದ್ರೂ ಸೂರ್ಯ ಒಂದು ಮಾತು ಕೂಡ ಆಡಿರಲಿಲ್ಲ.
ಇದು ಭಾರೀ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿತ್ತು. ವಿರಾಟ್ ನ ಅಭಿಮಾನಿಗಳು ಸೂರ್ಯ ಕುಮಾರ್ ಗೆ ಬೈದ್ರೆ, ಇನ್ನು ಕೆಲವರು ವಿರಾಟ್ ವಿರುದ್ಧ ಕಿಡಿ ಕಾರಿದ್ದರು.
ಆದ್ರೆ ಅಸಲಿ ಕಾರಣ ಏನು ಅಂದ್ರೆ, ವಿರಾಟ್ ಕೊಹ್ಲಿ ಅವರು ಸೂರ್ಯ ಕುಮಾರ್ ಯಾದವ್ ಅವರ ಅಭಿಮಾನಿ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೈಖರಿ ಮತ್ತು ಬದ್ಧತೆಗೆ ಸೂರ್ಯ ಕುಮಾರ್ ಯಾದವ್ ಕೂಡ ಫಿದಾ ಆಗಿಬಿಟ್ಟಿದ್ದರು.
ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ಆಡುವಾಗಲೂ ಕೂಡ ಸೂರ್ಯ ಕುಮಾರ್ ಯಾದವ್ ತನ್ನ ಟ್ವಿಟರ್ ನಲ್ಲಿ ವಿರಾಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಸಂದೇಶಗಳನ್ನು ಬರೆದುಕೊಂಡಿದ್ದರು.
ಯಾವಾಗ ಒತ್ತಡವಿರುತ್ತೋ.. ಟೀಮ್ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ದೇವರು ನಡೆದಾಡಿಕೊಂಡು ಬರುತ್ತಾನೆ ಅಂತ ವಿರಾಟ್ ಕೊಹ್ಲಿಯವರನ್ನು ಮೆಚ್ಚಿ ತನ್ನ ಟ್ವಿಟರ್ ಖಾತೆಯಲ್ಲಿ ಈ ಹಿಂದೆ ಸೂರ್ಯಕುಮಾರ್ ಯಾದವ್ ಬರೆದುಕೊಂಡಿದ್ದರು.
ಇದೀಗ ವಿರಾಟ್ ಮತ್ತು ಸೂರ್ಯ ನಡುವಿನ ವಾಗ್ವಾದದ ಬಳಿಕ ಈ ಹಳೆಯ ಟ್ವಿಟರ್ ಮತ್ತೆ ಜೀವ ಪಡೆದುಕೊಂಡಿದೆ.
ಒಂದಂತೂ ಸತ್ಯ.. ಆಟ ಅಂದ ಮೇಲೆ ಅಲ್ಲಿ ಘರ್ಷಣೆ, ವಾಗ್ವಾದ, ಮಾತಿನ ಸಮರ ಎಲ್ಲವೂ ನಡೆಯುವುದು ಸಹಜ.
ಅದೇ ರೀತಿ ವಿರಾಟ್ ಮತ್ತು ಸೂರ್ಯ ಕುಮಾರ್ ನಡುವಿನ ವಾಗ್ವಾದ ಕೂಡ ಇಲ್ಲಿಗೆ ಮುಗಿದ್ರೆ ಸಾಕು. ಇಬ್ಬರು ಕೂಡ ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಂಡ್ರೆ ಒಳ್ಳೆಯದ್ದು. ಅದು ಕ್ರೀಡಾ ಸ್ಪೂರ್ತಿ ಮೆರೆದಂತೆ ಆಗುತ್ತದೆ.
ಈ ಘಟನೆಯಲ್ಲಿ ಸೂರ್ಯ ಕುಮಾರ್ ದಿಟ್ಟಿಸಿ ನೋಡಿದ್ದು ತಪ್ಪು ಅಂತ ಅನ್ನೋದಾದ್ರೆ, ವಿರಾಟ್ ಕೊಹ್ಲಿ ವಾಗ್ವಾದ ಮಾಡಿಕೊಂಡು ಸೂರ್ಯ ಕುಮಾರ್ ಬಳಿ ಬಂದಿದ್ದು ಕೂಡ ತಪ್ಪು.
ಅದೇನೇ ಇರಲಿ, ತನ್ನ ಆಟಕ್ಕೆ ಮನ ಸೋತಿರುವ ವಿರಾಟ್ ಕೊಹ್ಲಿ ತನ್ನ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಹಾಗೇ ತನ್ನನ್ನು ಗುರಾಯಿಸಿಕೊಂಡು, ಬೈದಾಡಿಕೊಂಡು ತನ್ನ ಬಳಿಗೆ ಟೀಮ್ ಇಂಡಿಯಾದ ದೇವ್ರು ಬರುತ್ತಿದ್ದಾನೆ…ಅದನ್ನೇ ತಾನು ದಿಟ್ಟಿಸಿಕೊಂಡು ನೋಡುತ್ತಿದ್ದೆ.. ದೇವರು ಏನು ಹೇಳಿದ್ರೂ ಸುಮ್ಮನಾಗಿರಬೇಕು ಅಂತ ಸೂರ್ಯ ಕುಮಾರ್ ಅಂದುಕೊಂಡಿದ್ರಾ…!
ಅದೆಲ್ಲಾ ಯಾವನಿಗೊತ್ತು.. ಇಲ್ಲಿ ಸರಿ ಯಾರದ್ದೂ ತಪ್ಪು ಯಾರದ್ದೂ ಅನ್ನೋದಕ್ಕಿಂತ ಆಟಕ್ಕಿಂತ ಯಾರು ದೊಡ್ಡವರಲ್ಲ ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು.
ಯಾಕಂದ್ರೆ ಯಾರು ಎಷ್ಟೇ ಸಾಧನೆ, ಹೆಸರು ಯಶಸ್ಸು ಗಳಿಸಿದ್ರೂ ಕೊನೆಗೆ ಅವರನ್ನು ಮೇರು ಮಟ್ಟಕ್ಕೇರಿಸುವುದು ಅವರ ವರ್ತನೆ ಮತ್ತು ವ್ಯಕ್ತಿತ್ವ ಅಷ್ಟೇ..!