ಐಪಿಎಲ್ 2021-ಭಾಗ -2- ಯುಎಇಗೆ ಭೇಟಿ ನೀಡಿದ ಬಿಸಿಸಿಐ ಪದಾಧಿಕಾರಿಗಳು
2021ರ ಐಪಿಎಲ್ ಭಾಗ-2ರ ಪಂದ್ಯಗಳನ್ನು ಆಯೋಜನೆ ಮಾಡಲು ಬಿಸಿಸಿಐ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಜಿ ಅರುಣ್ ಧುಮಾಲ್ ಅವರು ದುಬೈನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದ್ರೆ ಈ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭಾಗಿಯಾಗಿಲ್ಲ.
ಬಿಸಿಸಿಐ 14ನೇ ಆವೃತ್ತಿಯ ಟೂರ್ನಿಯನ್ನು ಸೆಪ್ಟಂಬರ್ 17 ಅಥವಾ 19ರಿಂದ ಶುರು ಮಾಡಲು ಚಿಂತನೆ ನಡೆಸಿದೆ. ದುಬೈ, ಅಬುಧಾಬಿ ಮತ್ತು ಶಾರ್ಜಾದಲ್ಲಿ ಪಂದ್ಯಗಳನ್ನು ಆಯೋಜನೆ ಮಾಡಲಾಗುವುದು.
ಈ ನಡುವೆ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಂದುವರಿದ ಐಪಿಎಲ್ ಪಂದ್ಯಗಳನ್ನು ಮೈದಾನದಲ್ಲೇ ನೋಡಬಹುದಾಗಿದೆ. ಶೇ. 30ರಷ್ಟು ಪ್ರೇಕ್ಷಕರನ್ನು ಮೈದಾನದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆಯಂತೆ. ಆದ್ರೆ ಇದಕ್ಕೂ ಕೆಲವೊಂದು ಷರತ್ತುಗಳಿವೆ. ಆಯಾ ತಾಣಗಳ ಕೋವಿಡ್ ಮಾರ್ಗಸೂಚಿಯ ಪ್ರಕಾರ ಅನುವು ಮಾಡಿಕೊಡಲಾಗುವುದು. ಇನ್ನೂ ಪಂದ್ಯಗಳು ಜೈವಿಕ ಸುರಕ್ಷತೆಯಡಿಯಲ್ಲಿ ನಡೆಯಲಿದೆ.
ಇನ್ನೊಂದೆಡೆ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ. ಸೆಪ್ಟಂಬರ್ -ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ಬಾಂಗ್ಲಾ ದೇಶ ಪ್ರವಾಸ ಮಾಡಲಿದೆ. ಹಾಗೇ ನ್ಯೂಜಿಲೆಂಡ್, ಬಾಂಗ್ಲಾ ದೇಶ ಸರಣಿ ಹಾಗೂ ಯುಎಇ ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದೆ. ಇಂಗ್ಲೆಂಡ್ ಕೂಡ ಬಾಂಗ್ಲಾ ದೇಶ ಮತ್ತು ಪಾಕಿಸ್ತಾನ ವಿರುದ್ಧ ಆಡಲಿದೆ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳ ನಡುವೆಯೂ ಇದೇ ವೇಳೆ ಸರಣಿ ನಡೆಯಲಿದೆ. ಹಾಗೇ ವೆಸ್ಟ್ ಇಂಡೀಸ್ ನಲ್ಲಿ ಕೆರೆಬಿಯನ್ ಪ್ರೀಮಿಯರ್ ಲೀಗ್ ನಡೆಯಲಿದೆ.
ಈಗಾಗಲೇ ಬಿಸಿಸಿಐ ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆ ಮಾತುಕತೆಯನ್ನು ಕೂಡ ನಡೆಸುತ್ತಿದೆ. ಅಲ್ಲದೆ ಕೆರೆಬಿಯನ್ ಪ್ರಿಮಿಯರ್ ಲೀಗ್ ಅನ್ನು ಸ್ವಲ್ಪ ಮುಂಚಿತವಾಗಿ ನಡೆಸುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಮನವಿ ಮಾಡಿಕೊಂಡಿದೆ. ಸೆಪ್ಟಂಬರ್ 19ರಂದು ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.