ಐಪಿಎಲ್ 2021 ಫೈನಲ್ ಮ್ಯಾಚ್ – ಅಂತಿಮ 11ರ ಬಳಗದ ಲೆಕ್ಕಚಾರ
14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕಟ್ಟ ಕಡೆಯ ಪಂದ್ಯ ಇಂದು ದುಬೈ ಇಂಟರ್ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಹೋರಾಟ ನಡೆಸಲಿವೆ.
ಮೂರು ಬಾರಿ ಚಾಂಪಿಯನ್ ಆಗಿರುವ ಸಿಎಸ್ ಕೆ ತಂಡದ ಅಂತಿಮ 11ರ ಬಳಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. ರೈನಾ ಬದಲು ಸ್ಥಾನ ಗಿಟ್ಟಿಸಿಕೊಂಡಿರುವ ರಾಬಿನ್ ಉತ್ತಪ್ಪ ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಹಾಗೇ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಮತ್ತು ರವೀಂದ್ರ ಜಡೇಜಾ ಆನೆ ಬಲ ತುಂಬುತ್ತಿದ್ದಾರೆ. ಇನ್ನುಳಿದಂತೆ ಫಫ್ ಡು ಪ್ಲೇಸಸ್, ಅಂಬಟಿ ರಾಯಡು, ನಾಯಕ ಧೋನಿ ಹಾಗೂ ಬ್ರೇವೋ ಬ್ಯಾಟಿಂಗ್ ಬೆನ್ನಲುಬಾಗಿದ್ದಾರೆ. ಬೌಲಿಂಗ್ ನಲ್ಲಿ ಜೋಶ್ ಹಾಝಲ್ ವುಡ್, ದೀಪಕ್ ಚಾಹರ್ ಮತ್ತು ಶಾರ್ದೂಲ್ ಥಾಕೂರ್ ಎದುರಾಳಿ ತಂಡಕ್ಕೆ ಅಪಾಯ ಒಡ್ಡುವ ವೇಗ ದೂತರಾಗಿದ್ದಾರೆ.
ಇನ್ನು ಕೆಕೆಆರ್ ತಂಡ ಕೂಡ ಗೆಲುವಿನ ಅಭಿಯಾನವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ತಂಡದಲ್ಲಿ ಬದಲಾವಣೆಗೆ ಮುಂದಾಗುವ ಸಾಧ್ಯತೆಗಳಿಲ್ಲ. ಆದ್ರೆ ಆಂಡ್ರೆ ರಸೆಲ್ ಚೇತರಿಸಿಕೊಂಡಿದ್ರೆ ಶಕೀಬ್ ಆಲ್ ಹಸನ್ ಹೊರಗುಳಿಯಬೇಕಾಗುತ್ತದೆ.
ಇನ್ನುಳಿದಂತೆ ಆರಂಭಿಕ ಶುಬ್ಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೇಶ್ ರಾಣ, ರಾಹುಲ್ ತ್ರಿಪಾಠಿ ಮತ್ತು ನಾಯಕ ಇಯಾನ್ ಮೊರ್ಗಾನ್, ಹಾಗೂ ದಿನೇಶ್ ಕಾರ್ತಿಕ್ ಕೆಕೆಆರ್ ತಂಡದ ಬ್ಯಾಟಿಂಗ್ ಶಕ್ತಿಗಳು. ಸುನೀಲ್ ನರೇನ್ ಮತ್ತು ವರುಣ್ ಚಕ್ರವರ್ತಿ ಅವರ ಸ್ಪಿನ್ ಮ್ಯಾಜಿಕ್ ಜೊತೆಗೆ ಶಿವಮ್ ಮಾವಿ ಹಾಗೂ ಲೂಕಿ ಫಗ್ರ್ಯುಸನ್ ಅವರ ವೇಗದ ದಾಳಿ ತಂಡಕ್ಕೆ ವರದಾನವಾಗಬೇಕಿದೆ.
ಒಟ್ಟಿನಲ್ಲಿ ಮಾಜಿ ಚಾಂಪಿಯನ್ ತಂಡಗಳ ಕಾದಾಟವನ್ನು ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.