ಇಂದು ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆ …!
ಆಗಸ್ಟ್ 2, 2020 ಅಂದ್ರೆ ಇಂದು ಐಪಿಎಲ್ ಆಡಳಿತ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯು ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಎಲ್ಲರೂ ಈ ಸಭೆಯನ್ನು ಕಾತರದಿಂದ ಕಾಯುತ್ತಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸಂಪೂರ್ಣ ಭವಿಷ್ಯ ಈ ಸಭೆಯಲ್ಲಿ ನಿರ್ಧಾರವಾಗಲಿದೆ.
ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಜೈ ಶಾ, ಅರುಣ್ ಧೂಮಾಲ್ ಮತ್ತು ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರು ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಮುಖ್ಯವಾಗಿ ಐಪಿಎಲ್ ವೇಳಾಪಟ್ಟಿ, ಕೋವಿಡ್ ಮಾರ್ಗಸೂಚಿ ಮತ್ತು ಶಿಷ್ಟಚಾರ, ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್, ಐಪಿಎಲ್ ಪ್ರಾಯೋಜಕತ್ವದ ವಹಿಸಿರುವ ಚೀನಾದ ವಿವೋ ಕಂಪೆನಿ ಮತ್ತು ಚೀನಾ ಬಂಡವಾಳ ಹೊಂದಿರುವಂತಹ ಪೇ ಟಿಎಂ, ಡ್ರೀಮ್ ಇಲೆವೆನ್, ಬೈಜೂಸ್, ಸ್ವಿಗ್ವಿ ಕಂಪೆನಿಗಳ ಜಾಹೀರಾತು ಒಪ್ಪಂದ, ಬದಲಿ ಆಟಗಾರರ ಆಯ್ಕೆ, ಐಪಿಎಲ್ ಪದಾಧಿಕಾರಿಗಳ ಪ್ರಯಾಣ, ಬಿಸಿಸಿಐ ಮೆಡಿಕಲ್ ಯುನಿಟ್, ಜೈವಿಕ ಸುರಕ್ಷತೆ, 13ನೇ ಐಪಿಎಲ್ ಟೂರ್ನಿಯ ಸಿದ್ಧತೆ, ಆಟಗಾರರ ಸುರಕ್ಷತೆ, ಫ್ರಾಂಚೈಸಿಗಳು ಪಾಲಿಸಬೇಕಾದ ನಿಯಮಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು.
ಈ ನಡುವೆ ಯುಎಇನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಇನ್ನೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಅದೇ ರೀತಿ ವಿದೇಶಾಂಗ ಸಚಿವಾಲಯದಿಂದ ಸಹ ಒಪ್ಪಿಗೆ ಬಂದಿಲ್ಲ. ಐಪಿಎಲ್ ಮತ್ತು ಬಿಸಿಸಿಐ ಮಂಡಳಿ ಸರ್ಕಾರದ ನಿರ್ಧಾರವನ್ನು ಎದುರು ನೋಡುತ್ತಿದೆ. ಸದ್ಯದ ವೇಳಾಪಟ್ಟಿಯಂತೆ ಐಪಿಎಲ್ ಟೂರ್ನಿ ಸೆಪ್ಟಂಬರ್ 19ರಿಂದ ನವೆಂಬರ್ 10ವರೆಗೆ ನಡೆಯಲಿದೆ. ಫ್ರಾಂಚೈಸಿಗಳು ಆಗಸ್ಟ್ ಎರಡನೇ ವಾರದಿಂದ ದುಬೈಗೆ ಪ್ರಯಾಣ ಬೆಳೆಸಲಿವೆ. ಹಾಗೇ ಅಲ್ಲಿ ಕ್ವಾರಂಟೈನ್‍ನಲ್ಲಿದ್ದುಕೊಂಡು ಅಭ್ಯಾಸ ನಡೆಸಲಿವೆ.