ಟೆಲ್ ಅವಿವ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧ ಭೀಕರತೆ ಪಡೆದಿದೆ. ಈ ನಡುವೆ ಇಸ್ರೇಲ್ನ ರಕ್ಷಣಾ ಪಡೆ ಯದ್ಧಕ್ಕಾಗಿ ಲೇಸರ್ ಶಸ್ತ್ರಾಸ್ತ್ರ ಬಳಕೆ ಮಾಡಲು ಯೋಜಿಸಿರುವುದಾಗಿ ವರದಿಯಾಗಿದೆ.
ಸದ್ಯ ಯುದ್ಧದಲ್ಲಿ ಇಸ್ರೇಲ್ ಐರನ್ ಡೋಮ್ (Iron Dome) ಬಳಸುತ್ತಿತ್ತು. ಈಗ ಇಸ್ರೇಲ್ ಐರನ್ ಬೀಮ್ (Iron Beam) ವಾಯು ರಕ್ಷಣಾ ವ್ಯವಸ್ಥೆ ನಿಯೋಜಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ವೇಗವಾಗಿ ತನ್ನತ್ತ ಚಲಿಸುವ ಕ್ಷಿಪಣಿ ಅಥವಾ ಸ್ಫೋಟಕಗಳನ್ನು ಶಕ್ತಿಯುತ ಲೇಸರ್ ಕಿರಣಗಳಿಂದ ನಾಶಪಡಿಸುವ ವ್ಯವಸ್ಥೆ ಹೊಂದಿದೆ ಎನ್ನಲಾಗಿದೆ.
ಐರನ್ ಬೀಮ್ ಅನ್ನು 2025 ರಲ್ಲಿ ಇಸ್ರೇಲ್ನಲ್ಲಿ ಅಳವಡಿಸಲು ಯೋಜಿಸಲಾಗಿತ್ತು. ಹಮಾಸ್ ಉಗ್ರರೊಂದಿಗೆ ಭೀಕರ ಯುದ್ಧ ಪ್ರಾರಂಭವಾಗಿರುವುದರಿಂದ ಇಸ್ರೇಲಿ ರಕ್ಷಣಾ ಸಚಿವಾಲಯ ಅದನ್ನು ಶೀಘ್ರವಾಗಿ ನಿಯೋಜಿಸಲು ಯೋಜಿಸಿದೆ ಎನ್ನಲಾಗಿದೆ.
ಐರನ್ ಬೀಮ್ ಅನ್ನು ಮೊದಲ ಬಾರಿಗೆ 2014 ರಲ್ಲಿ ಅನಾವರಣಗೊಳಿಸಲಾಯಿತು. ಇಸ್ರೇಲ್ನಲ್ಲಿ ಇದನ್ನು ಇನ್ನೂ ಅಳವಡಿಸಲಾಗಿಲ್ಲ. ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ನಿರ್ಮಿಸಿದ ಐರನ್ ಬೀಮ್ ಸಿಸ್ಟಮ್ ಶಸ್ತ್ರಾಸ್ತ್ರ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು ಅದು ಶಕ್ತಿಯುತ ಬೆಳಕಿನ ಕಿರಣಗಳನ್ನು ಹಾಯಿಸುವ ಮೂಲಕ ಶತ್ರುಗಳ ಕ್ಷಿಪಣಿ ಅಥವಾ ಅಸ್ತ್ರಗಳನ್ನು ನಾಶಪಡಿಸುತ್ತದೆ ಎನ್ನಲಾಗಿದೆ.