ಟೆಲ್ ಅವಿವ್: ಇಸ್ರೇಲ್ (Israel) ಹಾಗೂ ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರತೆ ಪಡೆಯುತ್ತಿದೆ. ಗಾಜಾದ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರೆಸಿದ್ದು, ಸಾವು ನೋವಿನ ವರದಿ ಹೆಚ್ಚಾಗುತ್ತಿವೆ.
ಸೋಮವಾರ ಬೆಳಿಗ್ಗೆ ಗಾಜಾ ಪಟ್ಟಿಯಲ್ಲಿರುವ ಮೂರು ಆಸ್ಪತ್ರೆಗಳ (Hospital) ಸಮೀಪದಲ್ಲಿ ಇಸ್ರೇಲ್ ಬಾಂಬ್ ದಾಳಿ ಮಾಡಿದ್ದು, ಆಸ್ಪತ್ರೆ ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ. ಇಸ್ರೇಲ್ ಗಾಜಾ ನಗರದ ಶಿಫಾ ಮತ್ತು ಅಲ್-ಕುದ್ಸ್ ಆಸ್ಪತ್ರೆಗಳ ಹತ್ತಿರ ದಾಳಿ ನಡೆದಿದೆ. ಗಾಜಾದಲ್ಲಿನ ವಸತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 30 ಪ್ಯಾಲೆಸ್ತೀನಿಯನ್ನರು (Palestinians) ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿಯಿಂದ 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ತೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ಅಕ್ಟೋಬರ್ 7 ರಂದು ಪ್ಯಾಲೇಸ್ತೀನಿಯನ್ ಗುಂಪು ಹಮಾಸ್ ಇಸ್ರೇಲ್ ಮೇಲೆ ಹಠಾತ್ ದಾಳಿ ಆರಂಭಿಸಿದ್ದು, 1,400 ಜನರನ್ನು ಕೊಂದ ನಂತರ ಇಸ್ರೇಲ್ ತನ್ನ ದಾಳಿ ಆರಂಭಿಸಿತು. ಸದ್ಯ ಎರಡು ಕಡೆ ಸೇರಿ 4,600ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.