ಟೆಲ್ ಅವೀವ್: ಪ್ಯಾಲೆಸ್ತೇನ್ (Palestine) ಕಾರ್ಮಿಕರ ಬದಲಾಗಿ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ ಮುಂದಾಗಿದೆ ಎನ್ನಲಾಗಿದೆ.
ಹಮಾಸ್ ಉಗ್ರರ ಜೊತೆಗಿನ ಯುದ್ಧದ ನಂತರ 90 ಸಾವಿರ ಪ್ಯಾಲೆಸ್ತೇನ್ ಕಾರ್ಮಿಕರ ಕೆಲಸದ ಪರವಾನಗಿಯನ್ನು ಇಸ್ರೇಲ್ ರದ್ದು ಮಾಡಿದೆ. ಇದರ ಬದಲಿಗೆ 1 ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕಂಪನಿಗಳಿಗೆ ಅನುಮತಿ ನೀಡುವಂತೆ ಇಸ್ರೇಲಿ ನಿರ್ಮಾಣ (Construction) ಉದ್ಯಮವು ಸರ್ಕಾರಕ್ಕೆ ಮನವಿ ಮಾಡಿದೆ.
ನಾವು ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಬೇಡಿಕೆಗೆ ಅನುಮತಿ ನೀಡಲು ಇಸ್ರೇಲ್ ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಭಾರತದಿಂದ 50 ಸಾವಿರದಿಂದ 1 ಲಕ್ಷ ಕಾರ್ಮಿಕರನ್ನು ತೊಡಗಿಸಿಕೊಳ್ಳಲು ನಾವು ಆಶಿಸುತ್ತೇವೆ ಎಂದು ವೆಸ್ಟ್ ಬ್ಯಾಂಕ್ನ ವಾಯ್ಸ್ ಆಫ್ ಅಮೇರಿಕಾ ವರದಿಯು ಇಸ್ರೇಲ್ ಬಿಲ್ಡರ್ಸ್ ಅಸೋಸಿಯೇಶನ್ನ ಉಪಾಧ್ಯಕ್ಷ ಹೈಮ್ ಫೀಗ್ಲಿನ್ ಹೇಳಿಕೆ ನೀಡಿದ್ದಾರೆ.
ನಿರ್ಮಾಣ ಉದ್ಯಮದಲ್ಲಿ ಉದ್ಯೋಗಿಯಾಗಿರುವ ಕಾರ್ಮಿಕರ ಪೈಕಿ ಪ್ಯಾಲೆಸ್ತೇನಿಯನ್ನರು ಸರಿಸುಮಾರು ಶೇ. 25ರಷ್ಟು ಇದ್ದಾರೆ. ಮೇ ತಿಂಗಳಲ್ಲಿ ಇಸ್ರೇಲ್ ಭಾರತದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, 42 ಸಾವಿರ ಭಾರತೀಯರಿಗೆ ಇಸ್ರೇಲ್ನಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತದೆ. ನಿರ್ಮಾಣ ಮತ್ತು ನರ್ಸಿಂಗ್ ಕ್ಷೇತ್ರಗಳಲ್ಲಿ 42 ಸಾವಿರ ಭಾರತೀಯ ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಮತಿ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎನ್ನಲಾಗಿದೆ.