ಮಂಡ್ಯ : ಜೂನ್ ತಿಂಗಳ ‘ಮನ್ ಕೀ ಬಾತ್’ ಪ್ರಧಾನಿಯ ಕಾರ್ಯಕ್ರಮ ಶುರುವಾಗಿತ್ತು. ಎಷ್ಟೇ ಸಮಸ್ಯೆವಿದ್ದರೂ , ಎಲ್ಲೇ ಪ್ರವಾಸದಲ್ಲಿದ್ದರು ತಿಂಗಳ ಈ ಕಾರ್ಯಕ್ರಮ ರದ್ದಾದ ನಿದರ್ಶವಿಲ್ಲ. ಪ್ರತಿ ತಿಂಗಳು ನಮ್ಮ ದೇಶದಲ್ಲಿ ತೆರೆಮರೆಯಲ್ಲಿ ಸದ್ದಿಲ್ಲದೇ ಸಾಧನೆ ಗೈದ ಒಬ್ಬೊಬ್ಬ ಸಾಧಕರ ಪರಿಚಯವನ್ನು ದೇಶದ ಜನರಿಗೆ ಮಾಡಿಸುವ ಸಣ್ಣ ಪ್ರಯತ್ನ ಮೋದಿ ಮಾಡುತ್ತಿದ್ದಾರೆ.
ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ದಾಸನದೊಡ್ಡಿಯವರು. ಓದು ಕಾಣದ ಈ ಅಪರೂಪದ ವ್ಯಕ್ತಿ ಬೆಟ್ಟದಷ್ಟು ಅನುಭವ ಹೊಂದಿದ್ದಾರೆ. ಊರಲ್ಲಿ ಸ್ವಲ್ಪಜಮೀನು ಇದೆ. ಒಂದು ಸಣ್ಣಗುಡಿಸಲಿನ ಮನೆ. ಚಿಕ್ಕವಯಸಿನಿಂದ ಕುರಿ ಕಾಯುವ ಕಾಯಕ.
ತನ್ನ ಊರಿಗೆ ಅಂಟಿಕೊಂಡಿರುವ ಕುಂದಿನಿ ಬೆಟ್ಟಕ್ಕೆ, ಕುರಿ ಮೇಯಿಸಲು ಹೋಗುತ್ತಿದ್ದರು. ಆದರೆ ಆ ಬೆಟ್ಟದ ಮೇಲೆ ನೀರಿನ ಸಮಸ್ಯೆಯಿತ್ತು. ಮಳೆ ನೀರು ಶೇಕರಣೆ ಆಗದ ಇಳಿಜಾರು ಪ್ರದೇಶ ನಿಜ ಹೇಳಬೇಕೆಂದರೆ ಒಂದು ರೀತಿಯ ಬರಡು ಭೂಮಿ. ಬೇಸಗೆ ಬಂದರೆ ಪ್ರಾಣಿಗಳಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು ಆ ಬೆಟ್ಟದಲ್ಲಿ.
ಬೆಟ್ಟದ ಬಗ್ಗೆ ಚಿಕ್ಕಂದಿನಿಂದಲೇ ಎಲ್ಲವನ್ನು ಅರಿತಿದ್ದ ಆತ ಏನು ಮಾಡಲು ಸಾಧ್ಯವೆಂದು ತನ್ನಲ್ಲೇ ತಾನು ಕಲ್ಪನೆಯನ್ನು ರೂಪಿಸಿದ. ತಡಮಾಡದೆ ತನ್ನ ಬಳಿ ಇರುವ ಕುರಿಗಳನ್ನು ಮಾರಿ ಕೆರೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿ ಖರೀದಿ ಮಾಡಿ ಕೆರೆಯನ್ನು ತೋಡಲು ಶುರು ಮಾಡಿದರು. ಬೆಳಿಗ್ಗಿನ ಜಾವಾ ಬುತ್ತಿ ಕಟ್ಟಿಕೊಂಡು, ಹೆಗಲ ಮೇಲೆ ಕಂಬಳಿ ಹೊದ್ದುಕೊಂಡು ಬೆಟ್ಟಕ್ಕೆ ಬಂದರೆ ಸುಮಾರು 9 ಗಂಟೆಯವರೆಗೆ ಕೆರೆ ತೋಡುವ ಕಾಯಕ. ನಂತರ ಸಂಜೆ ವರೆಗೆ ಕುರಿ ಮೇಯಿಸುವ ಕೆಲಸ. ವರ್ಷವಿಡೀ ಯಾವುದೇ ರಜೆ ಮಾಡದೇ ದುಡಿದ ಕಾಯಕ ಯೋಗಿ ಕಾಮೇಗೌಡರು.
ನಮ್ಮ ದೇಶದಲ್ಲಿ ಇಂತಹ ಸಾಧಕರಿಗೆ ಹುಚ್ಚ ಅನ್ನುವ ಪಟ್ಟ ಸರ್ವೇ ಸಾಮಾನ್ಯವಾಗಿರುತ್ತದೆ. ಬರಡು ಭೂಮಿಯಲ್ಲಿ ನೀರು ಹುಡುಕುವ ಹುಂಬತನಕ್ಕೆ ಬೇರೆ ಏನೆಂದರೂ . ಆದರೆ ಅದು ಯಾವುದಕ್ಕೂ ತಲೆ ಕೆಡೆಸಿಕೊಳ್ಳದೆ ಕಾಮೇಗೌಡರು ಮಾತ್ರ ಸದಾ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ಮೊದಲ ಕೆರೆಯಲ್ಲಿ ನೀರು ಸಿಕ್ಕಿದ ಮೇಲೆ ತಮ್ಮ ಕೆಲಸವನ್ನು ನಿಲ್ಲಿಸಲೇ ಇಲ್ಲ. ಕಳೆದ 42 ವರ್ಷಗಳಲ್ಲಿ ಕಾಮೆಗೌಡರು 14 ಕೆರೆಗಳನ್ನು ತೋಡಿ ಮುಗಿಸಿದ್ದಾರೆ. ಎಲ್ಲಾ ಕೆರೆಗಳು ನೀರಿನ ಮೂಲವಾಗಿವೆ.
ಇವರ ಈ ಉತ್ಸಾಹವನ್ನು ನೋಡಿ ಅನೇಕ ಜನ ಖುಷಿ ಪಟ್ಟಿದ್ದಾರೆ. ಸುತ್ತಮುತ್ತಲಿನ ಜನ ‘ ಕೊಳದ ಅಣ್ಣ ‘ ಎಂದು ಕರೆದರು. ಕೆಲವರು ಶ್ರಮದಾನವನ್ನು ಮಾಡಿ ಗೌಡರ ಬೆಂಬಲಕ್ಕೆ ನಿಂತರೆ ಇನ್ನು ಕೆಲವರು ಧನ ಸಹಾಯ ಮಾಡಿದರು. ಹುಡುಕಿಕೊಂಡು ಬಂದದ್ದು ಹತ್ತಾರು ಜನ ಸನ್ಮಾನ ಸಮಾರಂಭ ಮಾಡಿ ಬಹುಮಾನ ಕೊಟ್ಟರು. ಬಂದ ದುಡ್ಡನ್ನು ಕೆರೆಯನ್ನು ತೋಡುವ ಕಾಯಕಕ್ಕೆ ಸುರಿದಿದ್ದಾರೆ. ಸುಮಾರು 15 ಲಕ್ಷಕ್ಕಿಂತ ಹೆಚ್ಚು ದುಡ್ಡನ್ನು ಅವರು ಕೆರೆ ತೋಡುವ ಕೆಲಸಕ್ಕೆ ಮೀಸಲಿಟ್ಟರು.
ಕಾಮೇಗೌಡರು ಶಾಲೆಗೆ ಹೋಗದಿದ್ದರೂ ಒಬ್ಬ ಆಧುನಿಕ ಭಗೀರಥರಾಗಿದ್ದಾರೆ. “ಯುಗಾದಿ ಮತ್ತು ಶಿವರಾತ್ರಿ ನಡುವೆ ಭೂಮಿಯು ತೇವಾಂಶವನ್ನು ಹಿಡಿದಿಟ್ಟು ಕೊಳ್ಳುತ್ತದೆ. ಆಗ ಅಂತರಜಲದ ಒರತೆ ಪತ್ತೆ ಹಚ್ಚುವುದು ಸುಲಭ” ಎನ್ನುತ್ತಾರೆ. ಮೊದಲು ತೋಡಿದ ಎರಡು ಕೆರೆಗಳಿಗೆ ಅವರು ತಮ್ಮ ಮಕ್ಕಳಾದ ಪೂಜಾ ಮತ್ತು ಪೂರ್ವಿ ಅವರ ಹೆಸರು ಇಟ್ಟಿದ್ದಾರೆ. ನಂತರದ ಎಲ್ಲಾ ಕೆರೆಗಳಿಗೆ ತಮ್ಮ ಮೊಮ್ಮಕ್ಕಳ ಮತ್ತು ಮರಿ ಮಕ್ಕಳ ಹೆಸರು ಇಟ್ಟಿದ್ದಾರೆ.
ಈಗ 84 ವರ್ಷ ಆಗಿದ್ದರೂ ಅವರ ಉತ್ಸಾಹ ಕುಂದಿಲ್ಲ. ‘ಪ್ರಧಾನಿಗಳು ನಿಮ್ಮ ಬಗ್ಗೆ ಮನ್ ಕಿ ಬಾತ್ ನಲ್ಲಿ ಮಾತನಾಡಿದರಲ್ಲ ಅಂದಾಗ ಅವರ ಮೊಗದಲ್ಲಿ ಒಂದು ಸಾರ್ಥಕ ಸೇವೆಯ ಸಮಾಧಾನವಿತ್ತು. ಮತ್ತೆ ಮಾತನಾಡಿದ ಅವರು “ಭಾರತದಲ್ಲಿ ಹುಟ್ಟಿದ್ದು ಸಾರ್ಥಕ ಅನ್ನಿಸುತ್ತಿದೆ. ನಾನು ಸಾಯುವ ತನಕ ನನ್ನ ಕೆರೆ ತೋಡುವ ಕಾಯಕ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾರೆ.
ಕಾಮೇಗೌಡರ ಪರಿಸರ ಸೇವೆಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡ ಅವರದು ಅಪರೂಪದ ಪರಿಸರ ಕಾಳಜಿ. 80ರ ಇಳಿ ವಯಸ್ಸಿನಲ್ಲೂ ಸ್ವಂತ ಖರ್ಚಿನಲ್ಲಿ ಸಣ್ಣ ಕೆರೆಗಳನ್ನು ನಿರ್ಮಿಸುವ ಅವರ ನಡೆ ಅನುಕರಣೀಯ ಮತ್ತು ಅಭಿನಂದನಾರ್ಹವಾದುದು.
ಕಾಮೇಗೌಡರು ಕುಂದಿನಿ ಬೆಟ್ಟದಲ್ಲಿ ನಿರ್ಮಿಸಿರುವ 14 ಕೆರೆಗಳೇ ಅವರ ನಿಸ್ವಾರ್ಥ ಪರಿಸರ ಕಾಳಜಿಯನ್ನು ಸಾರುತ್ತವೆ. ಈ ಕೆರೆಗಳಿಂದ ಬೆಟ್ಟದಲ್ಲಿ ಹಸಿರು ಸದಾ ಉಳಿದಿದೆ. ಗೌಡರು ತಮಗೆ ಸಿಕ್ಕ ಪ್ರಶಸ್ತಿಗಳ ಹಣವನ್ನೆಲ್ಲ ಕೆರೆಗಳ ನಿರ್ಮಾಣಕ್ಕೇ ಬಳಸುತ್ತಾ ಬಂದಿದ್ದಾರೆ. ಇಂತಹ ಅಪರೂಪದ ಪರಿಸರ ಕಾಳಜಿ ಮೆರೆಯುತ್ತಿರುವ ಗೌಡರಿಗೆ ದೇವರು ಇನ್ನೂ ಹೆಚ್ಚಿನ ಆಯುರಾರೋಗ್ಯ ನೀಡಲಿ ಎಂದು ಹಾರೈಸೋಣ ಹೇಳಿದ್ದಾರೆ.