ರಾಜ್ಯದಲ್ಲಿ ಈಗಾಗಲೇ ವರುಣ ರೌದ್ರಾವತಾರ ತಾಳಿದ್ದು, ಪ್ರವಾಹದ ಆತಂಕ ಎದುರಾಗಿದೆ. ಹೀಗಾಗೆ ಸರ್ಕಾರ ನೆರೆ ಪರಿಸ್ಥಿತಿ ಎದುರಿಸಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಕುರಿತಾಗಿ ಸಚಿವ ಆರ್ ಅಶೋಕ್ ಅವರು ಜಿಲ್ಲಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. 19 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿರುವ ಅಶೋಕ್ ಅವರು ಕಳೆದ ವಾರದಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಸಚಿವ ಅಶೋಕ್ ಅವರು ರಾಜ್ಯದ ಮಳೆ ಪರಿಸ್ಥಿತಿ, ಮಳೆ ಮುನ್ಸೂಚನೆ ಮತ್ತು ಜಲಾಶಯಗಳ ನೀರಿನ ಮಟ್ಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸಲಾಗುತ್ತಿದೆ. ಇನ್ನೂ ಕಾವೇರಿ ತೀರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಜಲಾಶಯಗಳ ಒಳಹರಿವು ಹೆಚ್ಚಲಿದೆ. ಹೀಗಾಗಿ ಕಾವೇರಿ ಕೊಳ್ಳದ ವ್ಯಾಪ್ತಿಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಈ ಕುರಿತಾಗಿ ಮಾತುಕತೆ ನಡೆಸಲಗಿದ್ದು ಮುನ್ನೆಚ್ಚೆರಿಕೆ ವಹಿಸಲು ಸೂಚನೆ ನೀಡಲಾಗಿದೆ. ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ಇತರೇ ಜಿಲ್ಲೆಗಳ ಜಿಲ್ಲಾದಿಕಾರಿಗಳಿಗೆ ಇಂದಿನಿಂದ ರೆಡ್ ಅಲರ್ಟ್ ಘೋಷಣೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಭಾಗಗಳಲ್ಲೂ ವರುಣ ಅಬ್ಬರಿಸಲಿದ್ದಾನೆ ಎನ್ನಲಾಗಿದೆ. ಅದ್ರಲ್ಲೂ ಶಿವಮೊಗ್ಗ, ಕೊಡಗು, ಹಾಸನ ಮತ್ತು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಹಾಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಇನ್ನೂ ಉತ್ತರ ಕನ್ನಡದಲ್ಲೂ ಕಳೆದ ಬಾರಿಯಂತೆ ಈ ಬಾರಿಯೂ ವರುಣ ರುದ್ರನರ್ತನ ಮರುಕಳಿಸಲಿದೆ ಎನ್ನಲಾಗ್ತಿದ್ದು, ಬೆಳಗಾವಿ, ಧಾರವಾಡ, ಹಾವೇರಿ, ಬೀದರ್ ಹಾಗೂ ಕಲಬುರಗಿಯಲ್ಲಿ ನಿರಂತರವಾಗಿ ಮಳೆಯಾಗಲಿದೆ. ಕೊಡಗು, ಧಾರವಾಡ, ಬೆಳಗಾವಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಎನ್‍ಡಿಆರ್‍ಎಫ್ ತಂಡವು ಬೇಟಿ ನೀಡಲಿದ್ದು, ಜನರ ಸಹಾಯಕ್ಕೆ ಸಕ್ರಿಯವಾಗಲಿದೆ ಎಂದು ಆರ್ ಅಶೋಕ್ ಅವರು ತಿಳಿಸಿದ್ದಾರೆ.








