ನಟ ಸೈಫ್ ಅಲಿ ಖಾನ್ (Saif Ali Khan) ಮನೆ ದೋಚಲು ಯತ್ನಿಸಿ, ಚಾಕು ಇರಿದಿದ್ದ ಆರೋಪಿಯನ್ನು ಮುಂಬಯಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದಿದ್ದ ದಾಳಿಕೋರನನ್ನು ನಿನ್ನೆ (ಜ.16) ತಡರಾತ್ರಿ ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕಾಗಿ ಮುಂಬಯಿ ಪೋಲಿಸರು 20 ತಂಡ ರಚಿಸಿ ಬಲೆ ಬೀಸಿದ್ದರು. ಕೊನೆಗೂ ದಾಳಿಕೋರ ಪೋಲೀಸರ ಅತಿಥಿಯಾಗಿದ್ದಾನೆ. ಸದ್ಯ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತನಾಗಿರುವ ಆರೋಪಿ ಈ ಹಿಂದೆ ಕೂಡ ಶಾರುಖ್ ಖಾನ್ ಮನೆ ಮುಂದೆ ಕಾಣಿಸಿಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ. ಶಂಕಿತ ಆರೋಪಿಯ ಫೋಟೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಮುಂಬೈ ಪೊಲೀಸರೇ ಬಹಿರಂಗಪಡಿಸಿದ್ದರು.
ಸೈಫ್ ಅಲಿಖಾನ್ ಮನೆಯಲ್ಲಿ ಅಡುಗೆ ಮಾಡುವವರಲ್ಲಿ ಒಬ್ಬರಾದ ಎಲಿಯಾಮಾ ಫಿಲಿಪ್ಸ್ ಅಲಿಯಾಸ್ ಲಿಮಾ, ಶಂಕಿತನನ್ನ ಮೊದಲು ನೋಡಿದ್ದರು ಎನ್ನಲಾಗಿದೆ. ಕೂಡಲೇ ಭಯದಲ್ಲಿ ಜೋರಾಗಿ ಕಿರುಚಿದ್ದಾರೆ. ಇದರಿಂದ ಎಚ್ಚರಗೊಂಡ ಸೈಫ್, ಹಂತಕನನ್ನು ಒಳ ನುಗ್ಗದಂತೆ ತಡೆಯಲು ಹೋರಾಡಿದ್ದಾರೆ. ಈ ವೇಳೆ ಹಂತಕ 6 ಬಾರಿ ಇರಿದು, ಎಡಗೈ ಮತ್ತು ಗುತ್ತಿಗೆ ಭಾಗವನ್ನು ಗಾಯಗೊಳಿಸಿದ್ದಾನೆ. ಹಂತಕ ಒಳ ನುಗ್ಗಲು ಪ್ರಯತ್ನಿಸಿದಾಗ ನಿನಗೇನು ಬೇಕು ಎಂದು ಕೇಳಲಾಗಿತ್ತು ಎನ್ನಲಾಗಿದೆ. ಆದರೆ, ಆ ವೇಳೆ ಹಂತಕ 1 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ದಾಳಿಯಲ್ಲಿ ಇಬ್ಬರು ಮನೆಯ ಸಹಾಯಕರೂ ಗಾಯಗೊಂಡಿದ್ದಾರೆ. ಸೈಫ್ ಅಲಿಖಾನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಆರೋಗ್ಯ ಸ್ಥಿರವಾಗಿದೆ.








