ದಾವಣಗೆರೆ : ತನ್ನ ಪ್ರಿಯತಮನಿಗಾಗಿ (Lover) ಪತಿಯನ್ನೇ ಮುಗಿಸಿರುವ ಘಟನೆಯೊಂದು ಜಿಲ್ಲೆಯ ಹಳೇ ಬಿಸಲೇರಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ತಡವಾಗಿ ಬೆಳಕಿಗೆ ಬಂದಿದೆ.
ಕಾವ್ಯಾ ಎಂಬಾಕೆಯೇ ತನ್ನ ಪ್ರಿಯಕರ ಬೀರೇಶ್ ಗಾಗಿ ತನ್ನ ಪತಿ ಲಿಂಗರಾಜ್ (24) ಕೊಲೆಯಲ್ಲಿ ಭಾಗಿಯಾಗಿದ್ದಾಳೆ ಎನ್ನಲಾಗಿದೆ.
ಪ್ರಿಯಕರ ಬೀರೇಶ್ ಜೊತೆ ಸೇರಿಕೊಂಡು ತನ್ನ ಪತಿಯನ್ನೇ ಮುಗಿಸಿದ ಕಾವ್ಯಾ, ಮನೆ ಸ್ವಚ್ಛ ಮಾಡುವಾಗ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಿದ್ದಾಳೆ. ಸಾವಿನ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸತ್ಯ ಬಯಲಿಗೆಳೆದು ಕಾವ್ಯಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಮೃತ ಲಿಂಗರಾಜ್ ಪತ್ನಿ ಕಾವ್ಯಾಗೆ ಬೀರೇಶ್ ಜೊತೆಗೆ ಅನೈತಿಕ ಸಂಬಂಧವಿತ್ತು. ಈ ಹಿಂದೆ ಇಬ್ಬರೂ ಮಂಗಳೂರಿಗೆ ಓಡಿ ಹೋಗಿದ್ದರು ಎನ್ನಲಾಗಿದೆ. ಆ ನಂತರ ಕಾವ್ಯಾಳನ್ನು ಕರೆ ತಂದು ರಾಜಿ ಸಂಧಾನದ ಮೂಲಕ ಗಂಡನೊಂದಿಗೆ ಬಿಟ್ಟಿದ್ದರು. ಕಾವ್ಯಾಗೆ ಇದು ಇಷ್ಟವಿಲ್ಲದಿದ್ದರಿಂದ ಗಂಡನನ್ನೇ ಮುಗಿಸಲು ಸ್ಕೆಚ್ ಹಾಕಿದ್ದಳು. ತಲೆಗೆ ಕಬ್ಬಿಣದ ಆಯುಧದಿಂದ ಹೊಡೆದು ಕೊಲೆ ಮಾಡಿ, ನಂತರ ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಳು.
ಲಿಂಗರಾಜ್ ತಾಯಿ ಅನುಮಾನಗೊಂಡು ಪೋಲೀಸ್ ಠಾಣೆಯಲ್ಲಿ ಕಾವ್ಯಾಳ ವಿರುದ್ಧ ದೂರು ನೀಡಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳನ್ನು ಜೈಲಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.








