ಮಕ್ಕಳ ಬಾಳಿಗೆ ಬೆಳಕಾದ ಕೋಟಿಗೊಬ್ಬ ಕಿಚ್ಚ
ಹುಬ್ಬಳ್ಳಿ : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಈಗಾಗಲೇ ಎಷ್ಟೋ ಮಂದಿಯ ಬಾಳಲ್ಲಿ ಬೆಳಕಾಗಿದ್ದಾರೆ. ಇದೀಗ ಹುಬ್ಬಳ್ಳಿಯ ರಾಮನಗರದಲ್ಲಿರುವ ಸರ್ಕಾರಿ ಅನುದಾನಿತ ಹರಿಜನ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿಯರ ಬಾಳಲ್ಲಿ ಬೆಳಕು ತಂದಿದ್ದಾರೆ.
ಹೌದು..! ಕಳೆದ ಒಂದು ವಾರದ ಹಿಂದೆ ಕೋರ್ಟ್ ನ ಆದೇಶ ಹಿಡಿದು ಬಂದಿದ್ದ ಗಾಂಧಿವಾಡ ಸೊಸೈಟಿ, ಮಕ್ಕಳ ಕಲಿಕೆಯನ್ನು ನೋಡದೆ ಎಲ್ಲರನ್ನ ಹೊರಹಾಕಿತ್ತು. ಮಕ್ಕಳು ಶಾಲೆಗಾಗಿ ಕಣ್ಣೀರು ಹಾಕಿದ್ದರು. ಕಲಿಯಲು ಕಟ್ಟಡವಿಲ್ಲದೆ, ಬೀದಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಈ ಸುದ್ದಿಯನ್ನ ಮಾಧ್ಯಮಗಳಲ್ಲಿ ನೋಡಿದ ಸುದೀಪ್ ಮಕ್ಕಳಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದರು.ಅದರಂತೆ ಇದೀಗ ಕೊಟ್ಟ ಮಾತಿನಂತೆ ತಮ್ಮ ಟ್ರಸ್ಟ್ ಮೂಲಕ ಮಕ್ಕಳ ಕಲಿಕೆಗೆ ಸಹಾಯದ ಹಸ್ತ ಚಾಚಿದ್ದಾರೆ.
ಸುದೀಪ್ ತಮ್ಮ ಟ್ರಸ್ಟ್ ಸದಸ್ಯರನ್ನ ರಾಮನಗರಕ್ಕೆ ಕಳುಹಿಸಿಕೊಟ್ಟು ಮಕ್ಕಳ ಪರಿಸ್ಥಿತಿಯನ್ನು ತಿಳಿದುಕೊಂಡಿದ್ದಾರೆ. ಮಾತ್ರವಲ್ಲದೆ ಸ್ವತಃ ಅವರೇ ವೀಡಿಯೋ ಕಾಲ್ ಮಾಡಿ ಮಕ್ಕಳು ಹಾಗೂ ಶಾಲೆಯ ಸಿಬ್ಬಂದಿ ಜೊತೆ ಮಾತನಾಡಿ ಧೈರ್ಯ ತುಂಬಿ ಮಕ್ಕಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.









