ಚಿಕ್ಕಬಳ್ಳಾಫುರ : ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋಗಿದ್ದ ಪೊಲೀಸ್ ಪೇದೆಯ ಮೇಲೆ ಟ್ರ್ಯಾಕ್ಟರ್ ಹಾಯಿಸಿದ್ದ ಘಟನೆ ಮಾಸುವ ಮುನ್ನವೆ ಮತ್ತೊಂದು ಇಂತಹ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ಗುಮ್ಮಲಾಪುರ ಗ್ರಾನೈಟ್ ಕ್ವಾರಿ ಬಳಿಯ ಜಮೀನಿನಲ್ಲಿ ರೈತನ (Farmer) ಮೇಲೆ ಲಾರಿ ಹರಿಸಿ ಹತ್ಯೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಅಡ್ಡಗಲ್ಲ ಗ್ರಾಮದ ರಾಘವೇಂದ್ರ (35) ಸಾವನ್ನಪ್ಪಿದ ರೈತ. ಜಮೀನಿನಲ್ಲಿ ಗ್ರಾನೈಟ್ ಲಾರಿ ಓಡಿಸದಂತೆ ತಾಕೀತು ಹಾಕಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಗುಮ್ಮಲಾಪುರ ಗ್ರಾನೈಟ್ ಕ್ವಾರಿ ಹತ್ತಿರ ಜಮೀನುಗಳಲ್ಲಿ ಲಾರಿಗಳ ಸಂಚಾರ ಮಿತಿ ಮೀರಿತ್ತು. ಹೀಗಾಗಿ ಜೂ.18ರಂದು ಜಮೀನಿನಲ್ಲಿ ಸಂಚರಿಸುತ್ತಿದ್ದ ಲಾರಿಗಳನ್ನು ರಾಘವೇಂದ್ರ ತಡೆದಿದ್ದರು. ಸಂಜೆ ಜಮೀನಿನಲ್ಲಿದ್ದ ರಾಘವೇಂದ್ರ ಅವರ ಮೇಲೆ ಲಾರಿ ಹರಿಸಲಾಗಿದೆ ಎಂದು ಎನ್ನಲಾಗುತ್ತಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತ ರಾಘವೇಂದ್ರನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾನೈಟ್ ಮಾಫಿಯಾ ಜೊತೆ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮತ್ತು ಆರ್.ಟಿ.ಒ ಸೇರಿದಂತೆ ಚಿಕ್ಕಬಳ್ಳಾಫುರ ಜಿಲ್ಲಾಡಳಿತದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿರುತ ಪರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








