ಸಚಿವಸ್ಥಾನ ಬೇಡ ಅನ್ನಲ್ಲ, ಡಿಸಿಎಂ ಆಗು ಅಂದ್ರೆ ಆಗ್ತೀನಿ : ಈಶ್ವರಪ್ಪ
ಶಿವಮೊಗ್ಗ : ನಾನು ಜಗದೀಶ್ ಶೆಟ್ಟರ್ ರೀತಿಯಲ್ಲಿ ಸಚಿವ ಸ್ಥಾನ ಬೇಡ ಅನ್ನೋಲ್ಲ. ಜೊತೆಗೆ ಲಾಬಿಯನ್ನೂ ಮಾಡುವುದಿಲ್ಲ. ಪಕ್ಷ ಉಪ ಮುಖ್ಯಮಂತ್ರಿ ಆಗು ಅಂದ್ರೆ ಆಗ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಕ್ಕೆ ಕೆ.ಎಸ್.ಈಶ್ವರಪ್ಪ ಮುನಿಸಿಕೊಂಡಿದ್ದು, ಡಿಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಅಲ್ಲದೆ ಸ್ವತಃ ಅವರೇ ರಾಜ್ಯದಲ್ಲಿ ಇನ್ನೂ ಬದಲಾವಣೆ ಆಗಲಿದೆ ಎಂದು ಕುತೂಹಲಕಾರಿ ಹೇಳಿಕೆಯನ್ನು ಕೂಡ ಕೊಟ್ಟಿದ್ದರು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕೆಲ ಸ್ವಾಮೀಜಿಗಳು ಈಶ್ವರಪ್ಪ ಅವರನ್ನು ಡಿಸಿಎಂ ಮಾಡಬೇಕೆಂದು ಒತ್ತಡ ಹೇರಿದ್ದರು. ಈ ವಿಚಾರಗಳ ಕುರಿತು ಇಂದು ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಈಶ್ವರಪ್ಪ, ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಜಗದೀಶ್ ಶೆಟ್ಟರ್ ರೀತಿಯಲ್ಲಿ ನಾನು ಸಚಿವ ಸ್ಥಾನ ಬೇಡ ಎಂದು ಹೇಳುವುದಿಲ್ಲ, ಜೊತೆಗೆ ಲಾಬಿಯನ್ನೂ ಮಾಡುವುದಿಲ್ಲ.
ಪಕ್ಷ ಉಪ ಮುಖ್ಯಮಂತ್ರಿ ಆಗು ಅಂದ್ರೆ ಆಗ್ತೇನೆ, ಸಚಿವನಾಗು ಅಂದ್ರೆ ಸಚಿವನಾಗುತ್ತೇನೆ. ಶಾಸಕನಾಗಿರು ಅಂದ್ರೆ ಶಾಸಕನಾಗಿಯೇ ಇರುತ್ತೇನೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಡಿಸಿಎಂ ಸ್ಥಾನದ ಬಗ್ಗೆ ಮಾತನಾಡಿ, ಪಕ್ಷದಲ್ಲಿ ಅತಿರಥ ಮಹಾರಥರು ಇದ್ದರೂ ಪಕ್ಷ ನನ್ನನ್ನು ಗುರುತಿಸಿ ಈ ಹಿಂದೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿತ್ತು.
ಈ ಬಾರಿಯೂ ನನಗಿಂತಲೂ ಹಿರಿಯರು, ಪ್ರವೀಣರು ಇದ್ದಾರೆ. ಆದರೆ ನಾನು ಉಪ ಮುಖ್ಯಮಂತ್ರಿ ಆಗಬೇಕು ಎಂದು ಹಲವು ಸಮಾಜದ ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದಾರೆ. ಆದ್ರೆ ಈ ರೀತಿ ಒತ್ತಡ ಹಾಕಬೇಡಿ ಎಂದು ಸುದ್ದಿಗೋಷ್ಠಿಯಲ್ಲಿ ಈಶ್ವರ್ಪಪ ಮನವಿ ಮಾಡಿಕೊಂಡರು.