ಕುಮಾರಸ್ವಾಮಿಯವರೇ ಕೀಳುಮಟ್ಟದ ರಾಜಕಾರಣ ಬಿಡಿ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಕುಮಾರಸ್ವಾಮಿಯವರೇ ಕೀಳುಮಟ್ಟದ ರಾಜಕಾರಣ ಬಿಡಿ. ರಾಜ್ಯದ ಜನರು ಇದನ್ನು ಒಪ್ಪಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.
ಸಿಎಂ ಬಿಎಸ್ ವೈ ದೆಹಲಿಗೆ ಹೋಗುವಾಗ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದಿದ್ದ ಕುಮಾರಸ್ವಾಮಿ ಅವರ ಹೇಳಿಕೆಗೆ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ಪಂಚಾಯ್ತಿ ಸದಸ್ಯನಿಗಿಂತಲೂ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ.ಗ್ರಾ.ಪಂ ಸದಸ್ಯರು ಚುನಾಯಿತರಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಸಿಎಂ ಆಗಿದ್ದಂತಹ ವ್ಯಕ್ತಿ ಈ ಮಟ್ಟಕ್ಕೆ ಇಳಿಯುತ್ತಿರುವುದು ನಿಜಕ್ಕೂ ನೋವಾಗುತ್ತಿದೆ. ಅವರು ಹೀಗೆ ಮಾತನಾಡುತ್ತಿದ್ದರೆ ಜನ ಛೀಮಾರಿ ಹಾಕುತ್ತಾರೆ ಎಂದು ಗುಡುಗಿದರು.
ಇನ್ನು ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರನ್ನು ಸನ್ಮಾನಿಸಲು ಬ್ಯಾಗ್ ನಲ್ಲಿ ಹಾರ ತುರಾಯಿ ಒಯ್ಯುತ್ತಿದ್ದರು. ಹಾಗಾದ್ರೇ ಆಗ ಅದರಲ್ಲಿ ಏನಿತ್ತು ಎಂದು ನಾನು ಈಗ ಕೇಳಲಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಯಡಿಯೂರಪ್ಪ ಅವರು ಕೇಂದ್ರದ ನೂತನ ಸಚಿವರನ್ನು ಅಭಿನಂದಿಸಲು ಬ್ಯಾಗ್ ನಲ್ಲಿ ಹಾರ ತುರಾಯಿ ಒಯ್ದಿದ್ದರು. ಯಡಿಯೂರಪ್ಪ ಅವರೂ ಯಾರನ್ನೂ ಮೆಚ್ಚಿಸಬೇಕಿಲ್ಲ ಎಂದು ಟೀಕೆ ಮಾಡಿದರು.