ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು
ಮುಂಬೈ, ಅಗಸ್ಟ್ 12: ಬಾಲಿವುಡ್ ನಟ ಸಂಜಯ್ ದತ್ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ವರದಿಯಾಗಿದೆ. ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ 61ವರ್ಷದ ಸಂಜಯ್ ದತ್ ಕೆಲವು ದಿನಗಳ ಹಿಂದೆ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು.

ತಮ್ಮ ಟ್ವಿಟರ್ ಖಾತೆಯಲ್ಲಿ ಸಂಜಯ್ ದತ್ ಈ ಬಗ್ಗೆ ಮಾಹಿತಿ ನೀಡಿದ್ದು, ವೈದ್ಯಕೀಯ ಚಿಕಿತ್ಸೆಯತ್ತ ಗಮನಹರಿಸಲು ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.ಅವರು ತಮ್ಮ ಅಭಿಮಾನಿಗಳಿಗೆ ಅನಗತ್ಯವಾಗಿ ಚಿಂತಿಸಬೇಡಿ ಎಂದು ಹೇಳಿದ್ದು, ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಹೇಳಿದ್ದಾರೆ. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗಿದ್ದಾರೆ ಮತ್ತು ಚಿಂತಿಸಬೇಡಿ ಎಂದು ನನ್ನ ಹಿತೈಷಿಗಳನ್ನು ಕೋರುತ್ತೇನೆ. ನಿಮ್ಮ ಪ್ರೀತಿ ಮತ್ತು ಶುಭಾಶಯಗಳೊಂದಿಗೆ, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಖ್ಯಾತ ಚಲನಚಿತ್ರ ಪತ್ರಕರ್ತ ಕೋಮಲ್ ನಹ್ತಾ ತಮ್ಮ ಟ್ವಿಟ್ಟರ್ ನಲ್ಲಿ ಸಂಜಯ್ ದತ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸೋಣ ಎಂದು ಟ್ವೀಟ್ ಮಾಡಿದ್ದಾರೆ. ಫಿಲ್ಮ್ ಇನ್ಫಾರ್ಮೇಶನ್‌ನ ವರದಿಯ ಪ್ರಕಾರ, ನಟ ಶೀಘ್ರದಲ್ಲೇ ಚಿಕಿತ್ಸೆಗಾಗಿ ಯುಎಸ್‌ಗೆ ಹಾರಲಿದ್ದಾರೆ.








