ದಲಿತ ವರನ ಕುದುರೆ ಮೆರವಣಿಗೆಗೆ ಅಡ್ಡಿಪಡಿಸಿದ ಆರೋಪದಲ್ಲಿ 9 ಮಂದಿಗೆ 5 ವರ್ಷ ಜೈಲು ಶಿಕ್ಷೆ
ಗುಜರಾತ್ : ಗುಜರಾತಿನ ಗಾಂಧಿನಗರ ಜಿಲ್ಲೆಯ ಪಾರ್ಸಾ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ದಲಿತ ವರ, ಕುದುರೆ ಸವಾರಿ ಮಾಡುವುದನ್ನು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 9 ಆರೋಪಿಗಳಿಗೆ ನ್ಯಾಯಾಲಯವು 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. 2018ರಲ್ಲಿ ಈ ಘಟನೆ ನಡೆದಿದ್ದು, ದರ್ಬಾರ್ ಸಮುದಾಯಕ್ಕೆ ಸೇರಿದ ಆರೋಪಿಗಳು, ಮದುವೆ ಮೆರವಣಿಗೆ ಅಡಚಣೆ ಉಂಟುಮಾಡಿದ್ದರು. ಇದೀಗ ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿರುವ ಸೆಷೆನ್ಸ್ ನ್ಯಾಯಾಲಯವು ಕ್ರಿಮಿನಲ್ ಬೆದರಿಕೆ, ದೌರ್ಜನ್ಯ ಸೇರಿ ಇನ್ನಿತರೇ ಕಾಯ್ದೆಯ ಸೆಕ್ಷನ್ ಅಡಿಯಲ್ಲಿ 9 ಆರೋಪಿಗಳನ್ನು ತಪ್ಪಿತಸ್ಥರು ಎಂದು ಪರಿಗಣಿಸಿ, 5 ವರ್ಷಗಳ ಜೈಲು ಶಿಕ್ಷೆಯ ಜತೆಗೆ 10 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.
2018ರ ಜೂನ್ 17ರಂದು ಪಾರ್ಸಾ ಗ್ರಾಮದಲ್ಲಿ ಪ್ರಶಾಂತಿ ಸೋಲಂಕಿ ಎನ್ನುವವರು ತಮ್ಮ ಮದುವೆ ನಿಮಿತ್ತ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ವಧುವಿನ ಮನೆಗೆ ಹೋಗುವ ಮಾರ್ಗಮಧ್ಯೆ ದರ್ಬಾರ್ ಸಮುದಾಯದ ಜನರ ಗುಂಪೊಂದು ಈ ಮೆರವಣಿಗೆಯನ್ನು ನಿಲ್ಲಿಸಿ. ದರ್ಬಾರ್ ಸಮುದಾಯದಂಥ ಧೈರ್ಯಶಾಲಿ ಜಾತಿಯ ಜನರು ಮಾತ್ರ ಕುದುರೆ ಸವಾರಿ ಮಾಡಬಹುದು ಎಂದು ವರನಿಗೆ ಧಮ್ಕಿ ಹಾಕಿದ್ದವರು. ನಂತರ ಪೊಲೀಸರು ಮಧ್ಯಪ್ರವೇಶಿಸಿ ರಕ್ಷಣೆ ನೀಡಿದ ಬಳಿಕ ಮೆರವಣಿಗೆ ಪೂರ್ಣಗೊಂಡಿತ್ತು. ಈ ಸಂಬಂಧ ದರ್ಬಾರ್ ಸಮುದಾಯದ 9 ಮಂದಿಯ ವಿರುದ್ಧ FIR ದಾಖಲಾಗಿತ್ತು. ಇದೀಗ ಅಂತಿಮವಾಗಿ 9 ಜನರನ್ನೂ ಶಿಕ್ಷೆಗೆ ಗುರಿಪಡಿಸಲಾಗಿದೆ.