“ಒಂದಕ್ಕೆ ಎರಡು ತೆಗೆದುಬಿಡಿ, ನಮ್ಮ ತಂಟೆಗೆ ಯಾರೂ ಬರುವುದಿಲ್ಲ” : ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ
ಶಿವಮೊಗ್ಗ : ಫೇಸ್ ವಿತ್ ದಿ ಸೇಮ್ ಸ್ಟಿಕ್. ಯಾವುದರಲ್ಲಿ ಹೊಡೆಯುತ್ತಾರೆಯೋ ಅದರಲ್ಲೇ ಹೊಡೆದು ಒಂದಕ್ಕೆರಡು ತೆಗೆದು ಬಿಡಿ. ಹೇಳುವುದು ಬೇಡ ಅಷ್ಟು ಶಕ್ತಿಶಾಲಿಯಾಗಿ ಬೆಳೆದಿದ್ದೇವೆ. ಈಗ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಆಗ ಎಲ್ಲ ಸಂದರ್ಭದಲ್ಲಿಯೂ ಸಮಾಧಾನವಾಗಿರಿ ಎಂದು ಹೇಳುತ್ತಿದ್ದೆವು. ಆದರೆ ಈಗ ಹಾಗಲ್ಲ ಯಾವುದರಲ್ಲಿ ಹೊಡೆಯುತ್ತಾರೆಯೋ ಅದರಲ್ಲೇ ತಿರುಗಿಸಿ ಹೊಡೆದು, ಒಂದಕ್ಕೆರಡು ತೆಗೆದು ಬಿಡಿ. ಫೇಸ್ ವಿತ್ ದಿ ಸೇಮ್ ಸ್ಟಿಕ್. ಹೇಳುವುದು ಬೇಡ ನಾವು ಅಷ್ಟು ಶಕ್ತಿಶಾಲಿಯಾಗಿ ಬೆಳೆದಿದ್ದೇವೆ. ಈಗ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ಕಾರ್ಯಕರ್ತರನ್ನುದ್ದೇಶಿಸಿ ಹೇಳಿದ್ದಾರೆ.
ಕೇರಳದಲ್ಲಿ ಚುನಾವಣೆಯಲ್ಲಿ ನಾವು ಗೆಲ್ಲದಿರಬಹುದು. ಆದರೆ ಹಿಂದುತ್ವದ ದೊಡ್ಡ ಅಲೆ ಏಳುತ್ತಿದೆ ಎಂದ ಈಶ್ವರಪ್ಪ, ತಮಿಳುನಾಡಿನಲ್ಲಿ ಘಟಾನುಘಟಿ ನಾಯಕರು ಸೋತರು. ನಟ ಕಮಲ್ ಹಸನ್ ಅವರನ್ನು ಸೋಲಿಸಿದ್ದು ಒಬ್ಬ ಬಿಜೆಪಿಯ ಮಹಿಳೆ. ಇದಕ್ಕೆ ಕಾರಣ ಹಿಂದಿನಿಂದ ನಮ್ಮ ಸಂಘಟನೆಯನ್ನು ಬಲಪಡಿಸಿರುವುದು ಕಾರಣ, ಹಲವು ತಪಸ್ವಿಗಳು ಪಕ್ಷವನ್ನು ಕಟ್ಟಿದ್ದಾರೆ ಎಂದರು.









