ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳ ಹದಗೆಟ್ಟ ಸ್ಥಿತಿಯ ಕುರಿತು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಮಾಡಿದ ಒಂದು ಟ್ವೀಟ್, ರಾಜ್ಯ ರಾಜಕಾರಣದಲ್ಲಿ ದೊಡ್ಡ ವಾಕ್ಸಮರಕ್ಕೆ ಕಾರಣವಾಗಿದೆ. ವಿದೇಶಿ ಹೂಡಿಕೆದಾರರೊಬ್ಬರ ಪ್ರಶ್ನೆಯನ್ನು ಮುಂದಿಟ್ಟು ಕಿರಣ್ ಅವರು ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕಿರಣ್ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕಿರಣ್ ಮಜುಂದಾರ್ ಟ್ವೀಟ್‌ನಲ್ಲಿ ಇದ್ದಿದ್ದೇನು?
ತಮ್ಮ ಬಯೋಕಾನ್ ಪಾರ್ಕ್‌ಗೆ ಭೇಟಿ ನೀಡಿದ್ದ ವಿದೇಶಿ ಉದ್ಯಮಿಯೊಬ್ಬರು ಕೇಳಿದ ಪ್ರಶ್ನೆಗಳಿಂದ ಬೇಸರಗೊಂಡ ಕಿರಣ್ ಮಜುಂದಾರ್ ಷಾ, ತಮ್ಮ ಅಸಮಾಧಾನವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. “ಬೆಂಗಳೂರಿನ ರಸ್ತೆಗಳು ಏಕೆ ಇಷ್ಟೊಂದು ಕೆಟ್ಟದಾಗಿವೆ ಮತ್ತು ಎಲ್ಲೆಂದರಲ್ಲಿ ಕಸ ಬಿದ್ದಿದೆ? ಸರ್ಕಾರವು ಹೂಡಿಕೆಯನ್ನು ನಿಜವಾಗಿಯೂ ಬೆಂಬಲಿಸಲು ಬಯಸುವುದಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ, ಅಲ್ಲಿನ ವ್ಯವಸ್ಥೆ ನೋಡಿದ್ದೇನೆ. ಭಾರತದಲ್ಲಿ ಎಲ್ಲವೂ ಅನುಕೂಲಕರವಾಗಿದ್ದರೂ ಮೂಲಸೌಕರ್ಯವನ್ನು ಏಕೆ ಸರಿಪಡಿಸಲು ಸಾಧ್ಯವಾಗುತ್ತಿಲ್ಲ?” ಎಂದು ಆ ಹೂಡಿಕೆದಾರರು ಪ್ರಶ್ನಿಸಿದ್ದಾಗಿ ಕಿರಣ್ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು. ಈ ಟ್ವೀಟ್ ಅನ್ನು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದರು.
ಸಚಿವ ಎಂ.ಬಿ. ಪಾಟೀಲ್ ಖಾರವಾದ ಪ್ರತಿಕ್ರಿಯೆ
ಕಿರಣ್ ಮಜುಂದಾರ್ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ, ಸಚಿವ ಎಂ.ಬಿ. ಪಾಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಕಿರಣ್ ಮಜುಂದಾರ್ ಅವರು ಬೆಂಗಳೂರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಅದೇ ರೀತಿ ಬೆಂಗಳೂರು ಕೂಡ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಇಡೀ ರಾಜ್ಯದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಹಾಳಾಗಿವೆ. ನಾವು ಈಗಾಗಲೇ 1000 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದೇವೆ, ಸ್ವಲ್ಪ ಸಮಯ ಬೇಕಾಗುತ್ತದೆ,” ಎಂದು ಸಚಿವರು ಸಮರ್ಥಿಸಿಕೊಂಡರು.
“ಅವರು ಈಗ ಈ ರೀತಿ ಮಾತನಾಡುವ ಅವಶ್ಯಕತೆ ಇರಲಿಲ್ಲ. ಅವರ ಸಿಎಸ್‌ಆರ್ (CSR) ನಿಧಿಯನ್ನು ಬಳಸಿ ಅವರೇ ಕೆಲಸ ಮಾಡಲಿ. ಮೋಹನ್ ದಾಸ್ ಪೈ ಅವರಿಗೂ ಕರ್ನಾಟಕ ಎಲ್ಲವನ್ನೂ ಕೊಟ್ಟಿದೆ. ಪದೇ ಪದೇ ಹೀಗೆ ಮಾತನಾಡುವುದರ ಉದ್ದೇಶವಾದರೂ ಏನು? ನಮ್ಮ ರಾಜ್ಯದಿಂದ ಯಾವ ಉದ್ಯಮಿಯೂ ಹೊರಗೆ ಹೋಗುವುದಿಲ್ಲ, ಬದಲಾಗಿ ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುತ್ತಿದ್ದಾರೆ,” ಎಂದು ಪಾಟೀಲ್ ತಿರುಗೇಟು ನೀಡಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿ, “ಅವರು (ಬಿಜೆಪಿಯವರು) ಇದ್ದಾಗ ಏನು ಬದನೆಕಾಯಿ ಮಾಡಿದ್ದಾರಾ? ಮಳೆಗಾಲದಲ್ಲಿ ಟಾರ್ ಹಾಕಬಾರದು, ಆದರೂ ಅನಿವಾರ್ಯವಾಗಿ ನಾವು ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ವಿಟ್ಟರ್‌ನಲ್ಲಿ ನೆಟ್ಟಿಗರ ಚರ್ಚೆ
ಕಿರಣ್ ಮಜುಂದಾರ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದು, ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿವೆ.
* ದಿನೇಶ್ ಜೋಶಿ ಎಂಬುವವರು, “ಸ್ವಚ್ಛ ನಗರ ಇಂದೋರ್ ಒಂದು ಉತ್ತಮ ಉದಾಹರಣೆ. ರಾಜಕೀಯ ಬದಿಗಿಟ್ಟು ನಾವು ಅದನ್ನು ಮಾದರಿಯಾಗಿ ಸ್ವೀಕರಿಸಬಹುದು. ಅಲ್ಲಿ ದಿನಕ್ಕೆ 550 ಟನ್ ಕಸವನ್ನು 20 ಟನ್ ಸಿಬಿಜಿ ಆಗಿ ಪರಿವರ್ತಿಸಲಾಗುತ್ತಿದೆ,” ಎಂದು ಸಲಹೆ ನೀಡಿದ್ದಾರೆ.
* ತೇಜಸ್ ಲಕ್ಷ್ಮಿ ಎಂಬುವವರು, “ನಿಮ್ಮಂತಹ ಉದ್ಯಮಿಗಳು ಒಂದೊಂದು ನಗರವನ್ನು ದತ್ತು ತೆಗೆದುಕೊಂಡು ಸಿಎಸ್‌ಆರ್ ನಿಧಿ ಬಳಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಅವಕಾಶ ನೀಡಬಹುದಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
* ಬಾಲಾಜಿ ಎಂಬುವವರು, “ಸಾರ್ವಜನಿಕ ಸೇವಕರು ಸಂಪೂರ್ಣ ಭ್ರಷ್ಟರು ಮತ್ತು ಅಸಮರ್ಥರು. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯು ಅವರನ್ನು ಹೊಣೆಗಾರರನ್ನಾಗಿ ಮಾಡುವುದನ್ನು ತಡೆಯುತ್ತಿದೆ,” ಎಂದು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಬೆಂಗಳೂರಿನ ಮೂಲಸೌಕರ್ಯದ ಕುರಿತ ಒಂದು ಟ್ವೀಟ್, ಉದ್ಯಮಿಗಳು ಮತ್ತು ಸರ್ಕಾರದ ನಡುವಿನ ಸಂಘರ್ಷಕ್ಕೆ ವೇದಿಕೆಯಾಗಿದ್ದು, ಆಡಳಿತದ ಹೊಣೆಗಾರಿಕೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ.








