LPG cylinder: ಆಂಧ್ರಪ್ರದೇಶದಲ್ಲಿ 100 ಕ್ಕೂ ಹೆಚ್ಚು ಸಿಲಿಂಡರ್ ಸ್ಪೋಟ.. ತಪ್ಪಿದ ಭಾರಿ ಅನಾಹುತಾ..
ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿ 100 ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಪೋಟಗೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ಲಾರಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಭಾರತ್ ಗ್ಯಾಸ್ ಸಿಲಿಂಡರ್‌ಗನ್ನ ಕರ್ನೂಲ್‌ನಿಂದ ನೆಲ್ಲೂರು ಜಿಲ್ಲೆಯ ಉಳವಪಾಡು ಕಡೆಗೆ ಸಾಗಿಸುತ್ತಿದ್ದಾಗ ಅನಂತಪುರ-ಗುಂಟೂರು ರಾಷ್ಟ್ರೀಯ ಹೆದ್ದಾರಿಯ ಪ್ರಕಾಶಂ ಜಿಲ್ಲೆಯ ಕೊಮರೋಳು ಮಂಡಲದ ದಡ್ಡವಾಡ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಲಾರಿಯ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಮೋಹನರಾಜು ಲಾರಿ ನಿಲ್ಲಿಸಿ ಕೆಳಗಿಳಿದು ಪರಾರಿಯಾಗಿದ್ದಾನೆ. ಸಂಪೂರ್ಣ ಗ್ಯಾಸ್ ಸಿಲಿಂಡರ್‌ಗಳು ಬೆಂಕಿಗಾಹುತಿಯಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಅರ್ಧ ಕಿ.ಮೀ. ದೂರದ ವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಸಿಲಿಂಡರ್‌ಗಳು ಸ್ಫೋಟಗೊಳ್ಳುತ್ತಿದ್ದಂತೆ ಎಚ್ಚೆತ್ತ ಹೆದ್ದಾರಿ ಪೊಲೀಸ್ ಅಧಿಕಾರಿಗಳು ಅಪಘಾತ ನಡೆದ ಸ್ಥಳದಿಂದ 300 ಮೀಟರ್ ದೂರದ ವರೆಗೆ ಸುಮಾರು 30 ಮನೆಗಳಿಂದ ಜನರನ್ನ ಸ್ಥಳಾಂತರಿಸಿದ್ದಾರೆ. 200 ಮೀಟರ್ ದೂರದಿಂದಲೇ ಬೆಂಕಿ ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಯತ್ನಿಸಿದ್ದಾರೆ. ಗ್ರಾಮದಿಂದ ದೂರದಲ್ಲಿ ಬೆಂಕಿ ಅಪಘಾತ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.








