ಎಂಪಿಎಲ್.. ಬರೀ ಫ್ಯಾಂಟಸಿ ಆಟವಲ್ಲ. ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರು ಹೌದು… !
ಎಂಪಿಎಲ್.. ಬರೀ ಫ್ಯಾಂಟಸಿ ಆಟವಲ್ಲ. ಇನ್ನು ಮುಂದೆ ಟೀಮ್ ಇಂಡಿಯಾ ಆಟಗಾರರ ಕಿಟ್ ಗೂ ಪ್ರಾಯೋಜಕತ್ವವನ್ನು ವಹಿಸಿಸಲಿದೆ.
ಹೌದು, ಮುಂದಿನ ಮೂರು ವರ್ಷಗಳ ಅವಧಿಗೆ ಎಂಪಿಎಲ್, ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕರಾಗಿ ಬಿಸಿಸಿಐ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ವಿಚಾರವನ್ನು ಬಿಸಿಸಿಐ ಅಪೆಕ್ಸ್ ಸಮಿತಿಯ ಸದಸ್ಯರೊಬ್ಬರು ಖಚಿತಪಡಿಸಿದ್ದಾರೆ. 2023ರವರೆಗೆ ಎಂಪಿಎಲ್ ಟೀಮ್ ಇಂಡಿಯಾ, ಭಾರತ ಎ, ಟೀಮ್ ಇಂಡಿಯಾ ಮಹಿಳಾ ತಂಡ ಮತ್ತು 19 ವಯೋಮಿತಿ ತಂಡಗಳಿಗೆ ಎಂಪಿಎಲ್ ಕಿಟ್ ಪ್ರಾಯೋಜಕತ್ವವನ್ನು ವಹಿಸಲಿದೆ.
ಈ ಹಿಂದೆ ಕಿಟ್ ಪ್ರಾಯೋಜಕತ್ವ ಹೊಂದಿದ್ದ ನೈಕಿ ಕಂಪೆನಿಯ ಒಪ್ಪಂದ ಮುಗಿದು ಹೋಗಿದೆ. ಕೋವಿಡ್ 19 ನಿಂದಾಗಿ ನೈಕಿ ಕಂಪೆನಿಯು ಪ್ರಾಯೋಜಕತ್ವವನ್ನು ಮುಂದುವರಿಸಿಲ್ಲ.
ಆದ್ರೆ ಎಂಪಿಎಲ್ ನೈಕಿ ಕಂಪೆನಿಗಿಂತ ಕಡಿಮೆ ಮೊತ್ತವನ್ನು ಬಿಸಿಸಿಐಗೆ ನೀಡಲಿದೆ. ನೈಕಿ ಕಂಪೆನಿಯು ಪ್ರತಿ ಪಂದ್ಯಕ್ಕೆ 88 ಲಕ್ಷ ರೂಪಾಯಿ ವೆಚ್ಚ ಮಾಡುತ್ತಿತ್ತು. ಆದ್ರೆ ಎಂಪಿಎಲ್ ನೀಡುತ್ತಿರುವುದು 65 ಲಕ್ಷ. ಈ ನಡುವೆ ಎಂಪಿಎಲ್ ಕಂಪೆನಿಯ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯದ ಶೇ,10ರಷ್ಟು ಹಣವನ್ನು ಬಿಸಿಸಿಐಗೆ ಸಂಭಾವಣೆಯ ರೂಪದಲ್ಲಿ ನೀಡಬೇಕಿದೆ.
ಮೊಬೈಲ್ ಪ್ರೀಮಿಯರ್ ಲೀಗ್, ಎಂಪಿಎಲ್ ಸದ್ಯ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೆ ಪ್ರಾಯೋಜಕತ್ವವನ್ನು ನೀಡಿದೆ. ಅದೇ ರೀತಿ ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಟಿಕೆಆರ್ ತಂಡದ ಜೊತೆಗೂ ಒಪ್ಪಂದ ಮಾಡಿಕೊಂಡಿದೆ. ಅದೇ ರೀತಿ ಐರ್ಲೆಂಡ್ ಮತ್ತು ಯುಎಇ ಕ್ರಿಕೆಟ್ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.