ಧೋನಿಯ ಸ್ಮೈಲ್.. ಎಲ್ಲವನ್ನೂ ಮರೆ ಮಾಚುವಂತೆ ಮಾಡುತ್ತೆ…!
ಮಹೇಂದ್ರ ಸಿಂಗ್ ಧೋನಿ..!
ಈ ಒಂದು ಹೆಸರು ಸಾಕು.. ಆಧುನಿಕ ಕ್ರಿಕೆಟ್ ಜಗತ್ತು ಒಂದು ಕ್ಷಣ ಹುಬ್ಬೇರಿಸುವಂತೆ ಮಾಡುತ್ತದೆ.
ಮಹೇಂದ್ರ ಸಿಂಗ್ ಧೋನಿಯ ಸ್ಮೈಲ್.. !
ಎಮ್.ಎಸ್. ಧೋನಿಯ ಮುಖದಲ್ಲಿ ಅರಳುವ ನಗು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
ಪಂದ್ಯ ಸೋಲಲಿ.. ಗೆಲ್ಲಲಿ.. ಮುಖದಲ್ಲಿ ಮಾತ್ರ ಮಂದಹಾಸವಿದ್ದೇ ಇರುತ್ತೆ. ಇದು ಧೋನಿ ತನ್ನ ವೃತ್ತಿ ಬದುಕಿನಲ್ಲಿ ಮೈಗೂಡಿಸಿಕೊಂಡು ಬಂದಿರುವ ತತ್ವ ಸಿದ್ಧಾಂತ.
ಮಹೇಂದ್ರ ಸಿಂಗ್ ಧೋನಿ ತಾಳ್ಮೆ..!
ಒಬ್ಬ ಕ್ರಿಕೆಟಿಗನಾಗಿ, ನಾಯಕನಾಗಿ ಮಹೇಂದ್ರ ಸಿಂಗ್ ತಾಳ್ಮೆಯನ್ನು ಕಳೆದುಕೊಂಡಿರುವುದು ತೀರಾ ಕಮ್ಮಿ. ಒಂದು ವೇಳೆ ಗೇಮ್ ಪ್ಲಾನ್ ವರ್ಕ್ ಔಟ್ ಆಗದೇ ಇದ್ದಾಗ ಅಥವಾ ಸಹ ಆಟಗಾರ ತನ್ನ ಮಾತನ್ನು ಕೇಳದೇ ಇದ್ದಾಗ ಧೋನಿ ಸಿಡಿಮಿಡಿಗೊಂಡಿದ್ದೂ ಇದೆ. ಆದ್ರೆ ಅದು ಆ ಕ್ಷಣ ಮಾತ್ರ.. ಮತ್ತೆ ಎಲ್ಲವನ್ನೂ ಮರೆತುಬಿಡುತ್ತಾರೆ. ಹೀಗಾಗಿಯೇ ಧೋನಿ ಸಹ ಆಟಗಾರರ ಪಾಲಿನ ನೆಚ್ಚಿನ ನಾಯಕನಾಗಿದ್ದು.
ಎಮ್.ಎಸ್.ಡಿ ಕೂಲ್ ಕ್ಯಾಪ್ಟನ್..!
ಹೌದು, ಎಮ್. ಎಸ್. ಧೋನಿ ಕೂಲ್ ಕ್ಯಾಪ್ಟನ್. ಎಂಥ ಒತ್ತಡವಿರಲಿ, ಮೈದಾನದಲ್ಲಿ ಮತ್ತು ಡ್ರೆಸಿಂಗ್ ರೂಮ್ ನಲ್ಲಿ ಅದನ್ನು ನಿಭಾಯಿಸುವ ಚಾಕಚಕ್ಯತೆ ಅವರಲ್ಲಿದೆ. ತಾಳ್ಮೆ, ಬುದ್ಧಿವಂತಿಕೆಯಿಂದಲೇ ತಂಡವನ್ನು ಮುನ್ನಡೆಸುವ ರೀತಿಗೆ ಧೋನಿಗೆ ಒಲಿದು ಬಂದಿರುವ ಹೆಗ್ಗಳಿಕೆಯೇ ಕೂಲ್ ಕ್ಯಾಪ್ಟನ್.
ಮಹೇಂದ್ರ ಸಿಂಗ್ ಧೋನಿ ಗ್ಯಾಂಬ್ಲರ್..!
ಎದುರಾಳಿ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಗ್ಯಾಂಬ್ಲರ್. ಯಾವಾಗ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅನ್ನೋದು ಯಾರಿಗೂ ಗೊತ್ತಾಗುವುದೇ ಇಲ್ಲ. ಪಿಚ್‍ನ ಮರ್ಮಾ ಮತ್ತು ಬ್ಯಾಟ್ಸ್ ಮೆನ್ ಗಳ ಮನಸ್ಥಿತಿ.. ಬೌಲರ್ ಗಳ ತಂತ್ರಗಾರಿಕೆಯಲ್ಲಿ ಎಮ್.ಎಸ್. ಧೋನಿ ಕ್ಷಣ ಮಾತ್ರದಲ್ಲಿ ತಿಳಿದುಕೊಳ್ಳುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ.
ಆದ್ರೆ ಧೋನಿ ಪರ್ವ ಈಗ ಮುಗಿಯುತ್ತಾ ಬಂದಿದೆ. 2019ರ ವಿಶ್ವಕಪ್ ಟೂರ್ನಿಯ ಬಳಿಕ ಸುಮಾರು ಒಂದು ವರ್ಷಗಳ ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.
ನಿಗೂಢವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿದ್ದ ಧೋನಿ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿಯ ಶಾಕ್ ನೀಡಿದ್ದರು.
ಇದಕ್ಕೆ ಕಾರಣವೂ ಇದೆ. ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಧೋನಿಗೆ ಒಂದು ಅರ್ಥಪೂರ್ಣ ವಿದಾಯ ಸಿಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು.
ಆದ್ರೆ ಧೋನಿ ಅಂತಹ ಅವಕಾಶವನ್ನೇ ನೀಡಲಿಲ್ಲ. ಕೋವಿಡ್ ಸೋಂಕು ಅವರ ವಿದಾಯದ ಪಂದ್ಯಕ್ಕೆ ಅಡ್ಡಿಯನ್ನುಂಟು ಮಾಡಿತ್ತು. ಟಿ-ಟ್ವೆಂಟಿ ವಿಶ್ವಕಪ್ ಆಡುವ ಮನಸ್ಸಿದ್ರೂ ಕೂಡ ಅದಕ್ಕೆ ಕಾಲ ಕೂಡಿ ಬರಲಿಲ್ಲ. ಹೀಗಾಗಿ ಧೋನಿ ಸಡನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.
ಇನ್ನು ಧೋನಿ ಐಪಿಎಲ್ ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಐಪಿಎಲ್ ಗೂ ವಿದಾಯ ಹೇಳ್ತಾರೆ ಅಂತ ಅಂದುಕೊಂಡಿದ್ದರು.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿದೆ.
ಮೂರು ಬಾರಿ ಚಾಂಪಿಯನ್ ಆಗಿದ್ದ ಸಿಎಸ್ ಕೆ ತಂಡ 2020ರ ಐಪಿಎಲ್ ನಲ್ಲಿ ಏಳನೇ ಸ್ಥಾನಪಡೆದುಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್ ಕೆ ಈ ಮಟ್ಟದ ನೀರಸ ಪ್ರದರ್ಶನ ನೀಡಿದ್ದು ಇದೇ ಮೊದಲ ಬಾರಿ.
ಈ ನಡುವೆ ಧೋನಿ ಕೆಲವೊಂದು ಪಂದ್ಯಗಳಲ್ಲಿ ತಮ್ಮ ಜೆರ್ಸಿಗಳನ್ನು ಪ್ರೀತಿಯಿಂದ ಕೇಳಿದ ಆಟಗಾರರಿಗೆ ಉಡುಗೊರೆಯಾಗಿ ನೀಡಿದ್ದರು.
ಆಗ ಬಹುತೇಕ ಮಂದಿ ಧೋನಿ ಕೊನೆಯ ಐಪಿಎಲ್ ಪಂದ್ಯ ಅಂತಲೇ ಭಾವಿಸಿದ್ದರು.
ಆದ್ರೆ ಧೋನಿ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.
ಎಲ್ಲರೂ ಅಂದುಕೊಂಡಿದ್ದರು ಇದು ನನ್ನ ಕೊನೆಯ ಐಪಿಎಲ್ ಟೂರ್ನಿ ಅಂತ. ಆದ್ರೆ ನಾನು ಮುಂದಿನ ಐಪಿಎಲ್ ನಲ್ಲೂ ಭಾಗಿಯಾಗುತ್ತೇನೆ ಅಂತ ಹೇಳುವ ಮೂಲಕ ಧೋನಿ ಮತ್ತೆ ಅಭಿಮಾನಿಗಳಿಗೆ ತನ್ನ ಬ್ಯಾಟಿಂಗ್ ಮತ್ತು ನಾಯಕನ ನೈಪುಣ್ಯತೆಯನ್ನು ತೋರಿಸಲು ಮುಂದಾಗಿದ್ದಾರೆ.
ಹಾಗೇ ನೋಡಿದ್ರೆ ಧೋನಿ ಗೂ ಸಿಎಸ್ ಕೆ ತಂಡದ ಈ ವರ್ಷದ ಪ್ರದರ್ಶನ ಬೇಸರವನ್ನುಂಟು ಮಾಡಿದೆ. ಬ್ಯಾಟಿಂಗ್ ನಲ್ಲೂ ಧೋನಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ.
ಅದು ಅಲ್ಲದೆ ಸಿಎಸ್ ಕೆ ತಂಡಕ್ಕೆ ಹೊಸ ಸ್ವರೂಪವನ್ನು ನೀಡಿ ನಾಯಕತ್ವದಿಂದ ಕೆಳಗಿಳಿಯುವ ಜವಾಬ್ದಾರಿ ಕೂಡ ಅವರ ಮೇಲಿದೆ.
ಕಳೆದ 10-11 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಧೋನಿ ಅಷ್ಟೊಂದು ಸುಲಭವಾಗಿ ತಂಡವನ್ನು ಬಿಡಲು ಸಿದ್ಧರಿಲ್ಲ.
2021ರ ಐಪಿಎಲ್ ಗೆ ಹೊಸ ತಂಡವನ್ನು ಕಟ್ಟಿ ಅದಕ್ಕೊಂದು ಭದ್ರ ಅಡಿಪಾಯ ಹಾಕಿಕೊಂಡುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ ಎಂಬುದನ್ನು ಅವರು ಕೂಡ ಮರೆತಿಲ್ಲ.
ಈಗಾಗಲೇ ಮುಂದಿನ ಐಪಿಎಲ್ ಗೆ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂಬ ಸುಳಿವನ್ನು ಕೂಡ ನೀಡಿದ್ದಾರೆ.
ಹೀಗಾಗಿ ಧೋನಿ ಮುಂದಿನ ಐಪಿಎಲ್ ನಲ್ಲಿ ಆಡುವುದು ಖಚಿತ. ಆದ್ರೆ 2021ರ ಐಪಿಎಲ್ ಎಲ್ಲಿ ನಡೆಯುತ್ತೆ ಅನ್ನೋದು ಇನ್ನೂ ಗೊತ್ತಿಲ್ಲ. ಇದೇ ವೇಳೆ ಪಂದ್ಯ ನೋಡಲು ಪ್ರೇಕ್ಷಕರು ಇರುತ್ತಾರೋ ಇಲ್ಲವೋ ಎಂಬುದು ಸಹ ಗೊತ್ತಾಗುತ್ತಿಲ್ಲ.
ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ನಲ್ಲಿ ಅರ್ಥಪೂರ್ಣ ವಿದಾಯ ಹೇಳ್ತಾರೆ ಎಂಬುದು ಅಷ್ಟೇ ಸತ್ಯ.