ಮಸ್ಕಿ ಚುನಾವಣೆ : ಮಾ.29ಕ್ಕೆ ಆರ್.ಬಸನಗೌಡ ತುರ್ವಿಹಾಳ ನಾಮಪತ್ರ R. Basanagouda
ಮಸ್ಕಿ (ರಾಯಚೂರು) : ರಾಜ್ಯದಲ್ಲಿ ಉಪಚುನಾವಣಾ ಕಣಗಳು ರಂಗೇರಿದ್ದು, ಮೂರು ಪಕ್ಷಗಳಿಂದ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಈ ಮಧ್ಯೆ ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ತುರ್ವಿಹಾಳ ಮಾರ್ಚ್ 29ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 29 ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್ ಬಸನಗೌಡ ತುರ್ವಿಹಾಳ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಅಂದು ಮಧ್ಯಾಹ್ನ ಸಾರ್ವಜನಿಕ ಸಭೆ ನಡೆಯಲಿದ್ದು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಹುಣಸೂರು ಮಾದರಿಯಲ್ಲಿ ಮಸ್ಕಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಧ್ರುವನಾರಾಯಣ, ಕೊವಿಡ್ -19 ನಿಯಮ ಜಾರಿಯಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ.
ಸಾರ್ವಜನಿಕರಿಗೊಂದು ತಮಗೊಂದು ನಿಯಮ ಮಾಡಿಕೊಂಡಿದೆ ಎಂದು ದೂರಿದರು.
