ಸ್ವಗ್ರಾಮಕ್ಕೆ ತಲುಪಿದ ನವೀನ್ ಪಾರ್ಥಿವ ಶರೀರ | ಮಧ್ಯಾಹ್ನ 2 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ
ಹಾವೇರಿ: ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನ ಇಂದು ಸ್ವಗ್ರಾಮಕ್ಕೆ ಕರೆತರಲಾಗಿದ್ದು, ವೀರಶೈವ ಸಂಪ್ರದಾಯದಂತೆ ಕುಟುಂಬಸ್ಥರು ಅಂತಿಮ ಪೂಜಾ ಕಾರ್ಯಗಳನ್ನ ನೆರವೇರಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸಕ್ಕೆ ನವೀನ್ ಪಾರ್ಥಿವ ಶರೀರ ತಲುಪಿದೆ. ನಂತರ ಸುಮಾರು ಅರ್ಧ ಗಂಟೆಗಳ ಕಾಲ ಕುಟುಂಬಸ್ಥರು ಪೂಜೆ ನೆರವೇರಿಸಿದರು. ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ವೇಗವಾಗಿ ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಲಾಯಿತು.
ಮಗನ ಮೃತದೇಹ ಕಂಡು ತಂದೆ, ತಾಯಿ ಕಣ್ಣೀರಿಟ್ಟಿದ್ದಾರೆ. ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಮಧ್ಯಾಹ್ನ 2 ಗಂಟೆಗಳವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬಳಿಕ ಪಾರ್ಥಿವ ಶರೀರರವನ್ನು ದಾವಣಗೆರೆಯ ಎಸ್ಎಸ್ ವೈದ್ಯಕೀಯ ಕಾಲೇಜಿಗೆ ತೆಗೆದುಕೊಂಡು ಹೋಗಲಾಗುವುದು.