ನಾನು…. ನೇಹಾ ಗೋಯಲ್…! ಸೈಕಲ್ ಫ್ಯಾಕ್ಟರಿಯಿಂದ ಟೋಕಿಯೋ ಒಲಿಂಪಿಕ್ಸ್ ತನಕ ನಡೆದು ಬಂದ ನನ್ನ ಹಾದಿ..!
ಇದು ಸುಮಾರು 13 ವರ್ಷಗಳ ಹಿಂದಿನ ನೈಜ ಕಥೆ. ಕೆಸರಿನಲ್ಲಿ ಅರಳುವ ಕಮಲದ ಹಾಗೇ. ಕಡುಬಡತನದಲ್ಲಿ ಬೆಳೆದು ತನ್ನ ಹಾಕಿ ಆಟದ ಬದುಕನ್ನು ರೂಪಿಸಿಕೊಂಡ ಆಟಗಾರ್ತಿಯ ಯಶಸ್ಸಿನ ಯಶೋಗಾಥೆ..
ಅದು ಹರಿಯಾಣದ ಸೋನೆಪತ್ ಹಾಕಿ ಅಕಾಡೆಮಿಯ ಮೈದಾನ. ಆ ಮೈದಾನದಲ್ಲಿ
ಪ್ರೀತಮ್ ರಾಣಿ ಸಿವಾಚ್ ಅವರು ಹಾಕಿ ತರಬೇತಿ ನಡೆಸುತ್ತಿದ್ದರು. ಪ್ರೀತಮ್ ರಾಣಿ ಸಿವಾಚ್ ಅವರು 2002ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಭಾರತ ಮಹಿಳಾ ತಂಡದ ಆಟಗಾರ್ತಿ. ಜೊತೆಗೆ ಅರ್ಜುನ ಪ್ರಶಸ್ತಿ ವಿಜೇತೆ ಕೂಡ. ಸಣ್ಣ ಮೈದಾನದಲ್ಲಿ ಹಾಕಿ ಅಕಾಡೆಮಿ ನಡೆಸುತ್ತಿದ್ದ ಪ್ರೀತಮ್ ರಾಣಿ ಸಿವಾಚ್ ಮುಂದೊಂದು ದಿನ ಭಾರತೀಯ ಹಾಕಿ ತಂಡಕ್ಕೆ ಅದ್ಭುತ ಆಟಗಾರ್ತಿಯನ್ನು ಕೊಡುಗೆ ನೀಡುತ್ತೇನೆ ಎಂದು ಅಂದುಕೊಂಡಿರಲಿಲ್ಲ.
ಆದ್ರೆ ಅದೊಂದು ದಿನ ಪ್ರೀತಮ್ ರಾಣಿ ಸಿವಾಚ್ ಅವರ ಕಣ್ಣಿಗೆ ಭರವಸೆಯ ಬೆಳಕೊಂದು ಕಂಡಿತ್ತು. ಪ್ರತಿ ದಿನ ಮೈದಾನದದ ಮೂಲೆಯಲ್ಲಿ ನಿಂತುಕೊಂಡು ಅಕಾಡೆಮಿಯಲ್ಲಿ ಹಾಕಿ ಆಡುತ್ತಿರುವುದನ್ನು ಒಬ್ಬಳು ಬಾಲಕಿ ಕುತೂಹಲದಿಂದ ನೋಡುತ್ತಿದ್ದಳು.
ಒಂದು ದಿನ ಪ್ರೀತಮ್ ರಾಣಿ ಸಿವಾಚ್ ಮನಸ್ಸಿಗೆ ಅದೇನು ತೋಚಿತ್ತೋ ಗೊತ್ತಿಲ್ಲ. ತಕ್ಷಣವೇ ಆ ಬಾಲಕಿಯನ್ನು ತನ್ನತ್ತ ಕರೆದ್ರು. ಅಲ್ಲದೆ ಕೈಗೆ ಸ್ಕಿಪಿಂಗ್ ಹಗ್ಗವನ್ನು ಕೊಟ್ಟು ಜಂಪ್ ಮಾಡು ಎಂದು ಆದೇಶ ಮಾಡಿದ್ದರು. ಅಲ್ಲಿಯವರೆಗೆ ಆ ಬಾಲಕಿಯ ಹೆಸರು ಕೂಡ ಪ್ರೀತಮ್ ರಾಣಿಗೆ ಗೊತ್ತಿರಲಿಲ್ಲ.
ಸ್ಕಿಪಿಂಗ್ ರೋಪ್ ನಲ್ಲಿ ಜಂಪು ಮಾಡುತ್ತಿದ್ದ ಆ ಬಾಲಕಿಯ ಸ್ಟೆಮಿನ ನೋಡಿ ಪ್ರೀತಮ್ ರಾಣಿ ಚಕಿತಗೊಂಡಿದ್ದರು. ಆಗ ಹೊಳೆದದ್ದೇ ಈ ಬಾಲಕಿಗೆ ನಾನು ಯಾಕೆ ಹಾಕಿ ತರಬೇತಿ ನೀಡಬಾರದು ? ಈಕೆಯನ್ನು ಹಾಕಿ ಆಟಗಾರ್ತಿಯನ್ನು ಮಾಡಬಾರದು ಎಂದು..!
ತಡ ಮಾಡದೇ ಆ ಬಾಲಕಿಯ ಹೆಸರು ಏನು ಕೇಳಿದಾಗ… ಆ ಬಾಲಕಿ ಹೆದರುತ್ತಲೇ ತನ್ನ ಹೆಸರು ಹೇಳಿದಳು. ಈ ಬಾಲಕಿಯೇ ಈಗ ಭಾರತ ಹಾಕಿ ತಂಡದ ಮಿಡ್ ಫೀಲ್ಡರ್ ನೇಹಾ ಗೋಯಲ್.
24 ವರ್ಷದ ನೇಹಾ ಗೋಯಲ್ ಅವರ ಜೀವನ ಕಥೆಯೇ ಒಂದು ರೋಚಕ. ಕತ್ತಲೆಯಿಂದ ಬೆಳಕಿನೆಡೆಗೆ ಅಂತರಲ್ಲ ಅದೇ ರೀತಿ. ಕತ್ತಲೆಯಲ್ಲಿ ಮಂಕಾಗಿದ್ದ ನೇಹಾ ಗೋಯಲ್ ಪ್ರತಿಭೆ ಸೂರ್ಯನಂತತೆ ಪ್ರಜ್ವಲಿಸಿ ಅನಾವರಣಗೊಂಡಿದ್ದು ಭಾರತ ಹಾಕಿ ತಂಡದ ಮಾಜಿ ಆಟಗಾರ್ತಿ ಪ್ರೀತಮ್ ರಾಣಿಯವರಿಂದ.
ಅಂದು 11ವರ್ಷದ ನೇಹಾ ಗೋಯಲ್ ಅವರ ಫಿಟ್ ನೆಸ್ ಗಮನಿಸಿದ್ದ ಪ್ರೀತಮ್ ರಾಣಿ ಸೀದಾ ಹೋಗಿದ್ದು ಒಂದು ಕೊಳಗೇರಿಯಲ್ಲಿದ್ದ ಕತ್ತಲೆಯ ಮನೆಗೆ. ಆ ಮನೆಯನ್ನು ನೋಡಿದಾಗ ಪ್ರೀತಮ್ ರಾಣಿಗೆ ಆಘಾತವಾಗಿತ್ತು. ಸರಿಯಾಗಿ ಬೆಳಕು, ಬಾಗಿಲು ಇಲ್ಲದ ಮನೆ. ಒಂದು ಕೊಠಡಿ, ಒಂದು ಸಣ್ಣ ಟಿವಿ.. ಮನೆಯ ಮೂಲೆಯಲ್ಲಿರುವ ಅಡುಗೆ ಮನೆ. ಮನೆಯನ್ನು ನೋಡಿದಾಗಲೇ ಪ್ರೀತಮ್ ರಾಣಿ ಅವರಿಗೆ ನೇಹಾ ಗೋಯಲ್ ಅವರ ಆರ್ಥಿಕ ಪರಿಸ್ಥಿತಿ ಅರಿವಾಗಿತ್ತು. ನಿನಗೆ ನಾನು ಊಟ ಕೊಡುತ್ತೇನೆ. ಹಾಕಿ ಆಡುತ್ತಿಯಾ ಎಂದು ಕೇಳಿದಾಗ ನೇಹಾ ಗೋಯಲ್ ತಡ ಮಾಡದೇ “ಹುಂ” ಅಂದುಬಿಟ್ಟಳು.
ಯಾಕಂದ್ರೆ ನೇಹಾ ಗೋಯಲ್ ಅವರಿಗೆ ಬಡತನ ಏನು ಎಂಬುದು ಗೊತ್ತಾಗಿತ್ತು. ಅದಕ್ಕಿಂತ ಹೆಚ್ಚಾಗಿ ಕುಡುಕ ತಂದೆಯ ಭಯದಿಂದ ಹೊರಬೇಕಾಗಿತ್ತು. ಪ್ರತಿ ದಿನ ಕುಡಿದು ಬಂದು ರಂಪಾಟ ಮಾಡುತ್ತಿದ್ದ ತಂದೆ ಒಂದು ಕಡೆಯಾದ್ರೆ, ತಾಯಿ ಸಾವಿತ್ರಿ ದೇವಿ ಕಷ್ಟಪಟ್ಟು ಸಂಸಾರ ಸಾಗಿಸುತ್ತಿರುವುದನ್ನು ಕಣ್ಣಾರೆ ಕಂಡಿದ್ದ ನೇಹಾಗೆ ಮನೆಯಿಂದ ಹೊರಬರಲು ದಾರಿಯೊಂದು ಸಿಕ್ಕಿತ್ತು. ಇಬ್ಬರು ಅಕ್ಕಂದಿರ ಪ್ರೀತಿ ಇದ್ರೂ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ ತಾಯಿಗೆ ನೆರವಿಗೆ ನಿಂತಿದ್ದಳು.
ಸ್ಥಳಿಯ ಸೈಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಿತ್ರಿ ದೇವಿಗೆ ಹಾಕಿ ತರಬೇತಿಯ ಬಳಿಕ ನೆರವಿಗೆ ಧಾವಿಸುತ್ತಿದ್ದಳು. ತಿಂಗಳಿಗೆ 2000 ವೇತನ ಪಡೆದು ಇಡೀ ಸಂಸಾರದ ಜವಾಬ್ದಾರಿಯನ್ನು ಸಾವಿತ್ರಿ ದೇವಿ ನಿಭಾಯಿಸುತ್ತಿದ್ದರು.
ಇನ್ನೊಂದು ಕಡೆ ಹಾಕಿ ಆಟವನ್ನು ಕರಗತ ಮಾಡಿಕೊಂಡ ನೇಹಾ ಗೋಯಲ್ ಕೋಚ್ ಪ್ರೀತಮ್ ರಾಣಿಯವರ ಅಚ್ಚುಮೆಚ್ಚಿನ ಶಿಷ್ಯೆಯಾದಳು.
ಕೊಟ್ಟ ಮಾತಿನಂತೆ ಪ್ರೀತಮ್ ರಾಣಿ ನೇಹಾ ಗೋಯಲ್ ಅವರನ್ನು ಹಾಕಿ ಆಟಗಾರ್ತಿಯಾಗಿ ರೂಪುಗೊಳಿಸಿದ್ರು. ರಾಜ್ಯಮಟ್ಟದ ಪಂದ್ಯವೊಂದರಲ್ಲಿ ನೇಹಾ ಸರಿಯಾಗಿ ಓಡುತ್ತಿರಲಿಲ್ಲ. ಆಟದ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದರು. ಆಗ ಕೋಚ್ ಏನಾಗಿದೆ ಎಂದು ಕೇಳಿದಾಗ ಕಾಲಿನ ಒಂದು ಶ್ಯೂನಲ್ಲಿ ದೊಡ್ಡ ರಂಧ್ರವಿತ್ತು. ಹೀಗಾಗಿ ನೇಹಾ ಗೋಯಲ್ ಸರಿಯಾಗಿ ಆಡಲು ಸಾಧ್ಯವಾಗಿರಲಿಲ್ಲ. ವಿರಾಮದ ವೇಳೆ ನೇಹಾ ಗೊಯಲ್ ಅವರನ್ನು ಪ್ರಿತಮ್ ರಾಣಿಯ ಅವರ ಪತಿ ಕುಲದೀಪ್ ಅವರು ಶ್ಯೂ ಅಂಗಡಿಗೆ ಕರೆದುಕೊಂಡು ಹೋಗಿ ಹೊಸ ಶ್ಯೂ ಖರೀದಿಸಿದ್ದರು. ಆನಂತರ ನೇಹಾ ಗೋಯಲ್ ಆಟದ ಶೈಲಿಯೇ ಬದಲಾಗಿ ಹೋಯ್ತು. ಮಹತ್ವದ ಘಟ್ಟದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿಗೂ ಕಾರಣಳಾಗಿದ್ದಳು ಎಂಬುದನ್ನು ಕೋಚ್ ಪ್ರೀತಮ್ ರಾಣಿ ಈಗಲೂ ನೆನಪಿಸಿಕೊಳ್ಳುತ್ತಾರೆ.
ಗೋಲು ಗಳಿಸುವ ಚಾಣಕ್ಯತೆ, ಆಟದಲ್ಲಿನ ವೇಗ ಹೀಗೆ ಹಾಕಿ ಆಟದ ಗ್ರಾಮರ್ ಗಳನ್ನು ಕಲಿತುಕೊಂಡ ನೇಹಾ ಗೋಯಲ್ ತನ್ನ 18ನೇ ಹರೆಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ರು. ನಂತರ ಹಿಂತಿರುಗಿ ನೋಡಲೇ ಇಲ್ಲ. ಭಾರತ ಹಾಕಿ ತಂಡದ ಕೋಚ್ ಜೋರೆಡ್ ಮರಿಂಜೆ ಅವರ ಗರಡಿಯಲ್ಲಿ ಪಳಗಿದ ನೇಹಾ ಗೋಯಲ್ ಭಾರತ ಹಾಕಿ ತಂಡದ ಪ್ರಮುಖ ಆಟಗಾರ್ತಿಯಾಗಿ ಹೊರಹೊಮ್ಮಿದ್ರು. ಇದೀಗ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತ ತಂಡದ ಪ್ರಮುಖ ಆಟಗಾರ್ತಿ ನೇಹಾ ಗೋಯಲ್.
ಕತ್ತಲ ಕೋಣೆಯಿಂದ ಹೊರಬಂದ ನೇಹಾ ಗೋಯಲ್ ತನ್ನ ಹಳೆಯ ಬದುಕನ್ನು ಇಂದೂ ಮರೆತಿಲ್ಲ. ಕಷ್ಟದ ಸಮಯದಲ್ಲಿ ತನ್ನ ಪ್ರತಿಭೆಯನ್ನು ಗುರುತಿಸಿ ಪೋಷಣೆ ಮಾಡಿದ ಪ್ರೀತಮ್ ರಾಣಿ ಅವರ ಅಕಾಡೆಮಿಗೆ ಸಹಾಯ ಮಾಡುತ್ತಿದ್ದಾರೆ.
ಹಾಗೇ ತನ್ನ ತಾಯಿ ಸಾವಿತ್ರಿ ದೇವಿ ದೆಹಲಿ – ಚಂಢಿಗಡ ಹೈವೆಯ ಹೈಫೈ ಏರಿಯಾದಲ್ಲಿ ಬಹುಅಂತಸ್ತಿನ ಮಹಡಿಯಲ್ಲಿ ಮನೆ ಮಾಡಿ ಸುಖವಾಗಿ ಜೀವನ ಸಾಗಿಸುವಂತೆ ಮಾಡಿದ್ದಾರೆ. ಆದ್ರೆ ಮಗಳ ಯಶಸ್ಸನ್ನು ನೋಡುವ ಭಾಗ್ಯ ನೇಹಾ ಗೋಯಲ್ ಅವರ ತಂದೆಗೆ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದ ತಂದೆಯ ಬಗ್ಗೆ ಅನುಕಂಪವೂ ಇದೆ. ಆದ್ರೆ ಭಯ ಮಾತ್ರ ಹೋಗಿಲ್ಲ. ಮಗಳು ಆಡುತ್ತಿರುವುದನ್ನು ನೋಡಲು ಅಕಾಡೆಮಿಗೆ ಬಂದು ರಂಪಾಟ ಮಾಡುತ್ತಿದ್ದ ತಂದೆಯನ್ನು ಅಕಾಡೆಮಿಯತ್ತ ಸುಳಿಯಬೇಡ ಎಂದು ಹೇಳಿದ್ದರು ನೇಹಾ ಗೋಯಲ್.
4.9 ಅಡಿ ಎತ್ತರ ನೇಹಾ ಗೋಯಲ್ ಅವರು ಅದ್ಭುತವಾಗಿ ಗೋಲು ದಾಖಲಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ತನ್ನ ಶಿಷ್ಯೆಯ ಸಾಧನೆಯ ಬಗ್ಗೆ ಕೋಚ್ ಪ್ರೀತಮ್ ರಾಣಿ ಅವರಿಗೆ ಹೆಮ್ಮೆ ಇದೆ.
ಒಟ್ಟಿನಲ್ಲಿ ಬಡತನ ಬೇಗೆಯಲ್ಲಿ ಅರಳಿದ ನೇಹಾ ಗೋಯಲ್, ಯುವ ಆಟಗಾರ್ತಿಯರಿಗೆ ಸ್ಪೂರ್ತಿಯ ಚಿಲುಮೆ. ಪ್ರತಿಭೆಗೆ ಅವಕಾಶ ನೀಡಿದ್ರೆ ಯಾವ ರೀತಿ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂಬುದಕ್ಕೆ ನೇಹಾ ಗೋಯಲ್ ಅವರ ಬದುಕು ಉತ್ತಮ ನಿದರ್ಶನ.







