ನವದೆಹಲಿ : ಭಾರತದೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದ್ದು, ಅತ್ತ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಅನ್ನು ಘೋಷಿಸಿ ಕರೆನ್ಸಿ ಬಿಡುಗಡೆ ಮಾಡಿದ್ದಾನೆ. ಇಕ್ವಿಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದಾನೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ನಿತ್ಯಾನಂದ, ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದಾನೆ. ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ನಿತ್ಯಾನಂದ ಮಾಡಿದ್ದಾನೆ.
ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾನೆ.