ಭ್ರಷ್ಟಾಚಾರ ಮತ್ತು ಅಪರಾಧಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ – ಯೋಗಿ
ಲಕ್ನೋ, ಜುಲೈ 12: ಉತ್ತರಪ್ರದೇಶದಲ್ಲಿ ನಡೆದ ರೌಡಿ ಶೀಟರ್ ಗಳ ಎನ್ ಕೌಂಟರ್ ಬಳಿಕ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿಪಕ್ಷಗಳ ಹಲವು ನಾಯಕರು ಟೀಕೆಗೆ ಗುರಿಯಾಗಿದ್ದಾರೆ.
ಪ್ರತಿಪಕ್ಷಗಳ ಟೀಕೆಗೆ ತಲೆ ಕೆಡಿಸಿಕೊಳ್ಳದ ಯೋಗಿ ಆದಿತ್ಯನಾಥ್ ನಮ್ಮ ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳಿಗೆ ಕೊನೆ ಹಾಡಲು ಎಂತಹ ಕಠಿಣ ಕ್ರಮಗಳನ್ನು ಜಾರಿಗೆ ತರಲು ನಾನು ಹಿಂದೆ ಸರಿಯುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿರುವ 200 ಮಿಲಿಯನ್ ಜನರ ಸಂರಕ್ಷಣೆ ನಮ್ಮ ಸರ್ಕಾರದ ಮೇಲಿದ್ದು, ಯಾವುದೇ ಕಾರಣಕ್ಕೂ ಭ‌್ರಷ್ಟಾಚಾರ ಮತ್ತು ಅಪರಾಧಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಉತ್ತರಭಾರತದ ವಲಸೆ ಕಾರ್ಮಿಕರು ರಾಜ್ಯಕ್ಕೆ ವಾಪಸಾಗಿದ್ದಾರೆ ಎಂದ ಮುಖ್ಯಮಂತ್ರಿ ಯೋಗಿ ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯಕ್ಕೆ 4 ಮಿಲಿಯನ್ ವಲಸೆ ಕಾರ್ಮಿಕರು ಹಿಂದಿರುಗಿರುವ ಬಗ್ಗೆ ಮಾಹಿತಿ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಲ್ಲ ವಲಸೆ ಕಾರ್ಮಿಕರಿಗೂ ರಾಜ್ಯದಲ್ಲೇ ಉದ್ಯೋಗ ಒದಗಿಸುವ ಕ್ರಮ ಕೈಗೊಂಡಿದ್ದೇವೆ. ಅಷ್ಟೇ ಅಲ್ಲ, ಈ ಮೊದಲು ಕೆಲಸ ಮಾಡುತ್ತಿದ್ದಲ್ಲಿಗೆ ವಾಪಸ್ ಹೋಗಿ ಕೆಲಸ ಮಾಡುತ್ತೇವೆ ಎಂದು ವಲಸೆ ಕಾರ್ಮಿಕರು ಇಚ್ಛೆ ಪಟ್ಟರೆ, ಅದಕ್ಕೂ ವ್ಯವಸ್ಥೆ ಮಾಡುವುದಾಗಿ ಯೋಗಿ ಹೇಳಿದರು.








