ಸಿಯೋಲ್: ಉತ್ತರ ಕೊರಿಯಾ (North Korea) ಬಲೂನ್ ಗೆ ಕಸ ಕಟ್ಟಿ ದಕ್ಷಿಣ ಕೊರಿಯಾಕ್ಕೆ ಕಳುಹಿಸಿ ಕಿರುಕುಳ ನೀಡಿದೆ.
ದಕ್ಷಿಣ ಕೊರಿಯಾದ (South Korea) 8 ಪ್ರಾಂತ್ಯಗಳಲ್ಲಿ ಸುಮಾರು 260 ಬಲೂನ್ ಗಳು ಪತ್ತೆಯಾಗಿವೆ. ಸಿಯೋಲ್ ಮತ್ತು ದೇಶದ ಆಗ್ನೇಯ ಪ್ರಾಂತ್ಯದ ಜಿಯೊಂಗ್‌ಸಾಂಗ್‌ನಲ್ಲಿಯೂ ಬಲೂನ್‌ಗಳು ಬಿದ್ದಿವೆ. ಬಲೂನ್‌ಗಳು ಕೊಳಕಿನಿಂದ ತುಂಬಿವೆ. ಹೀಗಾಗಿ ಜನರಿಗೆ ಮನೆಯಲ್ಲಿಯೇ ಇರುವಂತೆ ದಕ್ಷಿಣ ಕೊರಿಯಾದ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಬಲೂನ್‌ಗಳ ಹತ್ತಿರ ಹೋಗಬೇಡಿ ಹಾಗೂ ಅವುಗಳನ್ನು ಮುಟ್ಟಬೇಡಿ ಎಂಬುದಾಗಿ ಸೂಚನೆ ನೀಡಿದ್ದಾರೆ. ಬಲೂನ್‌ಗಳೊಂದಿಗೆ (Balloon) ಬಂದಿರುವ ಕಸದಲ್ಲಿ ಪ್ಲಾಸ್ಟಿಕ್ ಬಾಟ್ಲಿಗಳು, ಹಾಳಾದ ಶೂಗಳ ಭಾಗಗಳು ಮತ್ತು ಮಣ್ಣು ಸೇರಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿಯ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.
ಇದೊಂದು ಬೆದರಿಕೆಯಾಗಿದ್ದು, ಇಂತಹ ಅಮಾನವೀಯ ಕ್ರಮಗಳನ್ನು ಕೂಡಲೇ ನಿಲ್ಲಿಸುವಂತೆ ದಕ್ಷಿಣ ಕೊರಿಯಾದ ಸೇನೆಯು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ನೀಡಿದೆ. ಈ ಬಲೂನ್ ಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಟಾಯ್ಲೆಟ್ ಪೇಪರ್, ಬ್ಯಾಟರಿ, ಕಸ ಮತ್ತಿತರ ವಸ್ತುಗಳು ಬಲೂನ್ ಗಳಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.