ಹೆಣ್ಣು ಮಕ್ಕಳನ್ನ ಹೆತ್ತದ್ದಕ್ಕೆ ನಡುರಸ್ತೆಯಲ್ಲೆ ಥಳಿಸಿದ ಅತ್ತೆ….
ಇಬ್ಬರು ಹೆಣ್ಣು ಮಕ್ಕಳನ್ನು ಹೆತ್ತ ಕಾರಣಕ್ಕೆ ಮಹಿಳೆಯೊಬ್ಬಳ ಮೇಲೆ ಪತಿ ಹಾಗೂ ಅತ್ತೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆಯ ವೀಡಿಯೋ ಸೆರೆಯಾಗಿದ್ದು, ಇದರಲ್ಲಿ ಸಂತ್ರಸ್ತ ಮಹಿಳೆಗೆ ಆಕೆಯ ಅತ್ತೆಯ ಮನೆಯ ಇಬ್ಬರು ಹೆಂಗಸರು ದಾರಿ ಮಧ್ಯೆ ಥಳಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಲ್ಲದೇ ಈ ಇಬ್ಬರು ಮಹಿಳೆಯರು ಆಕೆಯನ್ನ ನಿಂದಿಸಿ ಅಳದಂತೆ ಅವಾಜ್ ಹಾಕಿದ್ದಾರೆ.
ತನಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಗಂಡು ಮಗು ಬೇಕೆಂದು ಪತಿ ಮತ್ತು ಅತ್ತೆಯಂದಿರು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು ಮತ್ತು ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ.
ನನ್ನ ಗಂಡ ಮತ್ತು ಅತ್ತೆಯಂದಿರು ನನಗೆ ಗಂಡು ಮಗುವಾಗಲಿಲ್ಲ ಅಂತ ಚಿತ್ರಹಿಂಸೆ ನೀಡುತ್ತಿದ್ದರು. ಅದರಲ್ಲಿಯೂ ನನಗೆ ಎರಡನೇ ಬಾರಿ ಹೆಣ್ಣು ಮಗು ಹುಟ್ಟಿದ ನಂತರ ಹೆಚ್ಚಾಗಿ ಕಿರುಕುಳ ನೀಡುತ್ತಿದ್ದರು. ಹಸಿವಿನಿಂದ ಬಳಲುತ್ತಿದ್ದರು ಎಷ್ಟೋ ಬಾರಿ ಊಟ ಹಾಕುತ್ತಿರಲಿಲ್ಲ. ಬಳಿಕ ನಾನೇ ಕೂಲಿ ಕೆಲಸಕ್ಕೆ ಹೋಗಲು ಆರಂಭಿಸಿದೆ ಎಂದು ಹೇಳಿದ್ದಾಳೆ.
ಮಹಿಳೆ ಮೇಲೆ ಪತಿ ಮತ್ತು ಅತ್ತೆ ಅಮಾನುಷವಾಗಿ ಹಲ್ಲೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿಂದಿಸುವುದು, ಕಾಲಿನಿಂದ ಒದೆಯುವುದು ಮತ್ತು ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ನಾವು ಎಫ್‌ಐಆರ್ ದಾಖಲಿಸಿದ್ದೇವೆ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಹೋಬಾ ಪೊಲೀಸ್ ವರಿಷ್ಠಾಧಿಕಾರಿ ಸುಧಾ ಸಿಂಗ್ ಹೇಳಿದ್ದಾರೆ.








