ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಧೃವೀಕರಣ ಆಗಲಿದೆ. ಬರುವ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಯಾಗಲಿದೆ. ಒಂದು ರಾಜಕೀಯ ಪಕ್ಷವೇ ವಿಲೀನ ಆಗುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ವಕ್ತಾರ ಅರವಿಂದ ಲಿಂಬಾಳಿ ಹೇಳುವ ಮೂಲಕ ಜೆಡಿಎಸ್, ಬಿಜೆಪಿಯಲ್ಲಿ ವಿಲೀನ ಆಗುತ್ತೆ ಎನ್ನುವ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ಬೆಂಗಳೂರಿನಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಲಿಂಬಾವಳಿ, ದೇಶದಲ್ಲಿ ಮೋದಿ ಅಲೆ, ಬಿಜೆಪಿ ಅಲೆ ಇದೆ. ಸಮ್ಮಿಶ್ರ ಸರ್ಕಾರದಲ್ಲಿದ್ದವರೇ ಈಗ ಕಿತ್ತಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಸುಭದ್ರವಾಗಿದೆ ಎಂಬುದರ ಸಂಕೇತವಾಗಿದ್ದು, ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಶೇ.70-80ರಷ್ಟು ಸ್ಥಾನಗಳನ್ನು ಕಾರ್ಯಕರ್ತರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯು ಕಾಂಗ್ರೆಸ್ ಒಳಜಗಳದ ಸೂಚನೆ ಎಂದು ಭಾವಿಸುತ್ತೇನೆ. ಹೆಚ್.ಸಿ ಮಹದೇವಪ್ಪ ಕೂಡ ಸಿದ್ದರಾಮಯ್ಯ ದನಿಗೂಡಿಸಿದ್ದಾರೆ. ಮೈತ್ರಿ ಸರ್ಕಾರದ ವೈಖರಿ ಖಂಡಿಸಿ 18 ಶಾಸಕರು ರಾಜೀನಾಮೆ ಕೊಟ್ಟರು. ಈಗ ರಾಜ್ಯದಲ್ಲಿ ಸ್ಥಿರ ಸರ್ಕಾರ ಇದೆ ಎಂದು ಲಿಂಬಾವಳಿ ಹೇಳಿದ್ದಾರೆ.
ಜನವರಿ 2 ಮತ್ತು 3ರಂದು ರಾಜ್ಯದ ವಿಶೇಷ ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ಜನವರಿ 8ರಿಂದ 11ರವರೆಗೆ ಜನಪ್ರತಿನಿಧಿ ಸಮಾವೇಶಗಳನ್ನು ಜಿಲ್ಲೆಗಳಲ್ಲಿ ನಡೆಸಿ ಗ್ರಾಮ ಪಂಚಾಯತ್‍ಗಳಿಗೆ ಆಯ್ಕೆಯಾದವರನ್ನು ಗೌರವಿಸಲಾಗುವುದು ಎಂದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ
ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಮತ್ತು ಕೃಷಿಕರ ಪರವಾದ ಆಡಳಿತವನ್ನು ಗಮನಿಸಿ ಜನರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಪಂಚಾಯತ್‍ಗಳಿಗೆ ಇದೀಗ ನೇರವಾಗಿ ಗರಿಷ್ಠ ಅನುದಾನ ಲಭಿಸುತ್ತಿದೆ. ಇದರ ಸದ್ಬಳಕೆಗಾಗಿ ಜನರು ಬಿಜೆಪಿಯ ಬೆಂಬಲಿತರನ್ನೇ ಆಯ್ಕೆ ಮಾಡಲಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25ನ್ನು ಬಿಜೆಪಿ, ರೈತರ ದಿನವಾಗಿ ಆಚರಿಸಲಿದೆ. ಪ್ರತಿ ಹೋಬಳಿಗಳಲ್ಲಿ ರೈತರ ಸಮಾವೇಶಗಳನ್ನು ಆಯೋಜಿಸಲಾಗುವುದು. ಕೇಂದ್ರ ಸರಕಾರದ ಕೃಷಿ ಸುಧಾರಣಾ ಕಾಯ್ದೆಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು 9 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ 2,000 ರೂಪಾಯಿಯನ್ನು ಬಿಡುಗಡೆ ಮಾಡಿ, ದೇಶದ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.







