ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 6 ವರ್ಷಗಳ ಕಾಲ ಅನರ್ಹಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆದಿದೆ.
ಹಿಂದೂ-ಸಿಖ್ ದೇವರುಗಳು ಹಾಗೂ ಆರಾಧನಾ ಸ್ಥಳಗಳ ಹೆಸರಿನಲ್ಲಿ ಬಿಜೆಪಿ ಮತ ಕೇಳಿದೆ. ಹೀಗಾಗಿ ಮೋದಿ ಅವರನ್ನು ಅನರ್ಹಗೊಳಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ವಕೀಲ ಆನಂದ್ ಎಸ್ ಜೊಂಧಳೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಏ.9 ರಂದು ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣದ ವಿರುದ್ಧ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ಹಿಂದೂ ಮತ್ತು ಸಿಖ್ ದೇವರುಗಳು ಮತ್ತು ಅವರ ಆರಾಧನಾ ಸ್ಥಳಗಳ ಹೆಸರಿನಲ್ಲಿ ಮತಯಾಚಿಸಿದ್ದಾರೆ. ವಿರೋಧಿ ರಾಜಕೀಯ ಪಕ್ಷಗಳು ಮುಸ್ಲಿಮರ ಪರವಾದ ಒಲುವು ಹೊಂದಿದ್ದಾರೆ ಎಂದು ಹೇಳಿದ್ದಾರೆ. ರಾಮ ಮಂದಿರ ನಿರ್ಮಾಣ, ಕರ್ತಾರ್ಪುರ ಸಾಹಿಬ್ ಕಾರಿಡಾರ್ ಅಭಿವೃದ್ಧಿ ಹಾಗೂ ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ನ ಪ್ರತಿಗಳನ್ನು ಮರಳಿ ತಂದಿರುವುದಾಗಿ ಪ್ರಧಾನಿ ಉಲ್ಲೇಖಿಸಿದ್ದಾರೆ ಎಂದು ವಕೀಲ ತಿಳಿಸಿದ್ದಾರೆ.
ಪ್ರಧಾನಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ದ್ವೇಷವನ್ನು ಉಂಟುಮಾಡುವ ಭಾಷಣ ಮಾಡಿದ್ದಾರೆ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್ಐಆರ್ ದಾಖಲಿಸಲು ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಅಡಿಯಲ್ಲಿ ಅವರನ್ನು ಆರು ವರ್ಷಗಳ ಕಾಲ ಚುನಾವಣೆಯಿಂದ ಅನರ್ಹಗೊಳಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.