ನವದೆಹಲಿ: ಹರಿಯಾಣದಲ್ಲಿ ಬಿಜೆಪಿ ಸತತ ಮೂರು ಬಾರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ದೆಹಲಿಯ ಬಿಜೆಪಿ (BJP) ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವದ ವೇಳೆ ಮಾತನಾಡಿದ ಅವರು, ಹರಿಯಾಣದ (Haryana Election Results) ಜನರು ಮತ್ತೊಮ್ಮೆ ಕಮಾಲ್ ಮಾಡಿದ್ದಾರೆ. ಕಮಲ್ ಕಮಲ್ ಮಾಡಿದ್ದಾರೆ. ನವರಾತ್ರಿಯ ನಾಲ್ಕನೇ ದಿನ. ತಾಯಿ ಕಾತ್ಯಾಯಿನಿ ಆರಾಧ್ಯನೆಯ ದಿನ. ಕ್ಯಾತಯಿನಿ ದೇವಿ ಕೈಯಲ್ಲಿ ಕಮಲದ ಹೂವಿದೆ. ಇಂತಹ ಪಾವನ ದಿನದಂದು ಹರಿಯಾಣದ ಜನತೆ ಕಮಲ ಅರಳಿಸಿದ್ದಾರೆ ಎಂದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಇದು ಭಾರತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.
ಸುಳ್ಳಿನ ರಾಶಿಯ ಮೇಲೆ ಅಭಿವೃದ್ಧಿ ಗ್ಯಾರಂಟಿ ಹೊರೆಯಾಯಿತು. ಹರಿಯಾಣ ಜನರು ಹೊಸ ಇತಿಹಾಸ ರಚಿಸಿದ್ದಾರೆ. 1966 ರಿಂದ ಸತತ ಮೂರನೇ ಬಾರಿಗೆ ಯಾವ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ದೊಡ್ಡ ದೊಡ್ಡ ಪಕ್ಷಗಳು ಆಡಳಿತ ನಡೆಸಿವೆ. ಅವುಗಳಿಗೆ ಸಾಧ್ಯವಾಗದ್ದನ್ನು ನಾವು ಮಾಡಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ಹೇಗೆ ವಿಷ ಬೀಜ ಬಿತ್ತಿದೆ ಎಂದು ಇಡೀ ದೇಶವೇ ನೋಡಿದೆ. ಹಲವು ತಲೆಮಾರುಗಳನ್ನು ಜಾತಿ ಹೆಸರಿನಲ್ಲಿ ಹೊಡೆದಾಡಲು ಬಿಟ್ಟಿದೆ. ಹಿಂದುಳಿದ ವರ್ಗ, ದಲಿತರ ಮೇಲೆ ಹೆಚ್ಚು ಶೋಷಣೆ ಮಾಡಿದೆ. ಅಧಿಕಾರ ಸಿಕ್ಕಾಗ ಎಂದು ದಲಿತ ಹಿಂದುಳಿದ ವರ್ಗದವರಿಗೆ ಅಧಿಕಾರ ನೀಡಲಿಲ್ಲ ಎಂದು ಗುಡುಗಿದ್ದಾರೆ.