ಮಾಸ್ಕೋ: ಯುವಕನೊಬ್ಬ ತನ್ನ ಪ್ರೇಯಸಿ ಮೇಲೆ ಅತ್ಯಾಚಾರ ನಡೆಸಿ, ಬರೋಬ್ಬರಿ 111 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಜೈಲಿನಲ್ಲಿದ್ದ. ಆದರೆ, ಆತನನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕ್ಷಮಿಸಿ ಬಿಡುಗಡೆ ಮಾಡಿಸಿದ್ದಾರೆ.
ಆ ಯುವಕ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದಾಗಿ ಹೇಳಿದ್ದಕ್ಕೆ ಆತನ ಅಪರಾಧ ಕ್ಷಮಿಸಿದ್ದಾರೆ ಎನ್ನಲಾಗಿದೆ. ವ್ಲಾಡಿಸ್ಲಾವ್ ಕಾನ್ಯುಸ್ ಎಂಬ ಯುವಕನೇ ಪ್ರೇಯಸಿ ಪೆಖ್ಟೆಲೆವಾ (Vera Pekhteleva) ಎಂಬ ಯುವತಿಯನ್ನು ಕ್ರೂರವಾಗಿ ಕೊಲೆ ಮಾಡಿ 17 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಸದ್ಯ ಸೇನೆಗೆ ಸೇರಿ ರಷ್ಯಾ ಸೈನಿಕರಿಗೆ ಸಹಾಯ ಮಾಡಲು ಬಯಸಿದ್ದಕ್ಕೆ ಆತನ ಶಿಕ್ಷೆ ಅವಧಿ ಇನ್ನೂ ಒಂದು ವರ್ಷ ಇರುವ ವೇಳೆಯೇ ಅಪರಾಧಿಯನ್ನು ಬಿಡುಗಡೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಆದರೆ, ಈ ನಿರ್ಧಾರಕ್ಕೆ ಯುವತಿಯ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಾಯಿ ಒಕ್ಸಾನಾ, ಕ್ಯಾನ್ಸನ್ ಶಸ್ತ್ರಾಸ್ತ್ರ ಹಿಡಿದು, ಮಿಲಿಟರಿ ಸಮವಸ್ತ್ರದಲ್ಲಿ ನಿಂತಿರುವುದು ನೋಡಿ ಆಘಾತಗೊಂಡಿದ್ದಾರೆ. ನನ್ನ ಮಗು ಸಮಾಧಿಯಲ್ಲಿ ಕೊಳೆಯುತ್ತಿದೆ. ಆದರೆ, ನನ್ನ ಮಗುವನ್ನು ಕೊಲೆ ಮಾಡಿದ ಆರೋಪಿ ಹೊರಗಿದ್ದಾನೆ. ಇದು ನಿಜಕ್ಕೂ ತುಂಬಾ ನೋವು ನೀಡುತ್ತಿದೆ. ಜೀವನದ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೇನೆ. ಇನ್ನು ಮುಂದೆ ನಾನು ಬದುಕುವುದರಲ್ಲಿ ಅರ್ಥ ಇಲ್ಲ. ಪುಟಿನ್ ಕ್ರಮ ನನ್ನನ್ನು ಸಂಪೂರ್ಣವಾಗಿ ಮುಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.