ಬೆಂಗಳೂರು. ಜೂನ್ 2: ನಾಳೆ ಅಂದರೆ, ಜೂನ್ 3ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಣಾಹಣಿ ಅಂತಿಮ ಘಟ್ಟದಲ್ಲಿ ಬಂದು ನಿಂತಿದೆ. ಈ ಹಿಂದೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿದ್ದ ಈ ಕ್ಷೇತ್ರದಲ್ಲೀಗ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪದವೀಧರ ಕ್ಷೇತ್ರದ ಹಾಲಿ ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡರು ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ರಾಮೋಜಿ ಗೌಡರ ನಡುವಿನ ನೇರ ಹಣಾಹಣಿ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಆದರೆ ಹಲವು ಕಾರಣಗಳನ್ನು ಅವಲೋಕಿಸಿದಾಗ ರಾಮೋಜಿಗೌಡರ ಗೆಲುವು ನಿಶ್ಚಿತ ಎಂದು ಅಂದಾಜಿಸಲಾಗುತ್ತಿದೆ. ಕೆಲವು ವಿಶ್ವಾಸಾರ್ಹ ಚುನಾವಣಾ ಸಮೀಕ್ಷೆಗಳ ಪ್ರಕಾರ ರಾಮೋಜಿ ಗೌಡರು ಅತ್ಯಂತ ದೊಡ್ಡ ಅಂತರದಲ್ಲಿ ಗೆಲ್ಲುವುದು ಪಕ್ಕಾ. ಅದಕ್ಕೆ ಹಲವು ಕಾರಣಗಳಿವೆ.
ಬೆಂಗಳೂರು ಪದವೀಧರ ಕ್ಷೇತ್ರ ಕಳೆದ ಎರಡು ದಶಕಗಳಿಗಿಂತ ಹೆಚ್ಚು ಅವಧಿ ಬಿಜೆಪಿಯ ಹಿಡಿತದಲ್ಲಿತ್ತು. ಬಿಜೆಪಿ ಹಿರಿಯ ನಾಯಕ ರಾಮಚಂದ್ರೇಗೌಡರು ಸತತ ಮೂರು ಬಾರಿ ಈ ಕ್ಷೇತ್ರದಿಂದಲೇ ವಿಧಾನ ಪರಿಷತ್ ಗೆ ಆಯ್ಕೆಯಾದವರು. 2018ರಲ್ಲಿ ಜೆಡಿಎಸ್ ನಿಂದ ಬಿಜೆಪಿಗೆ ವಲಸೆ ಬಂದಿದ್ದ ದೇವೇಗೌಡರು ಪುನಃ ಬೆಂಗಳೂರು ವಿಧಾನಪರಿಷತ್ ಕ್ಷೇತ್ರವನ್ನು ಬಿಜೆಪಿಗೆ ಭದ್ರಪಡಿಸಿದ್ದರು.
ಇತ್ತ ಎರಡು ಬಾರಿ ಸೋಲು ಅನುಭವಿಸಿದ್ದ ರಾಮೋಜಿ ಗೌಡರು, ಹಿಮ್ಮೆಟ್ಟದೆ ಚಟುವಟಿಕೆಯಿಂದ ಓಡಾಡಿಕೊಂಡಿದ್ದಾರೆ. ಮತದಾರರೊಂದಿಗೆ ಬೆರೆತು ಕೆಲಸ ಮಾಡಿದ್ದಾರೆ. ಪದವೀಧರರ ಸಂಕಷ್ಟಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿದ್ದಾರೆ. ಎರಡು ಬಾರಿ ಸೋತ ಸಿಂಪಥಿ ಮತ್ತು ನಿರಂತರವಾಗಿ ಸಕ್ರಿಯರಾಗಿರುವ ಸಂಗತಿಗಳು ಈ ಬಾರಿ ಅವರಿಗೆ ಪ್ಲಸ್ ಆಗುವ ಸಾಧ್ಯತೆಗಳು ಹೆಚ್ಚಿವೆ.
ಚುನಾವಣಾ ಕಣದಲ್ಲಿ ರಾಮೋಜಿ ಗೌಡರ ಮೇಲುಗೈಗೆ ಪ್ರಮುಖ ಕಾರಣಗಳು:
ಬೆಂಗಳೂರು ಪದವೀಧರ ಕ್ಷೇತ್ರದ ಹಾಲಿ ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡರ ವಿರುದ್ಧ ಸಾಕಷ್ಟು ದೊಡ್ಡ ಪ್ರಮಾಣದಲ್ಲಿಯೇ ಅಸಮಧಾನಗಳಿವೆ. ಕಳೆದ ೬ ವರ್ಷಗಳಿಂದ ದೇವೇಗೌಡರು ಯಾವುದೇ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಬಹುಪಾಲು ಅವಧಿ ನಿಷ್ಕ್ರಿಯರಾಗಿದ್ದ ದೇವೇಗೌಡರು, ಅಭ್ಯರ್ಥಿ ಎಂದು ಘೋಷಿತರಾಗಿದ್ದೆ ಕೊನೆಯ ಹಂತದಲ್ಲಿ. ಅ. ದೇವೇಗೌಡರನ್ನು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯನ್ನಾಗಿಸಲು ಆಂತರಿಕವಾಗಿ ಸಾಕಷ್ಟು ಗೊಂದಲಗಳಿದ್ದವು ಮತ್ತು ವಿರೋಧವಿತ್ತು.
ಚುನಾವಣಾ ಪ್ರಚಾರದಲ್ಲಿ ಕೈ ಅಭ್ಯರ್ಥಿ ರಾಮೋಜಿಗೌಡರಿಗೆ ಮೇಲುಗೈ ಆಗುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ, ಮರಾಠಿ ಜಾತಿ, ಮಹಾರಾಷ್ಟ್ರ ಮೂಲ ಎಂದು ವಿವಾಧ ಸೃಷ್ಟಿಸಲು ಮುನಿರತ್ನ ಪ್ರಯತ್ನಿಸಿದ್ದು, ನಂತರ ಕೂಡಲೇ ಕಾಂಗ್ರೆಸ್ ನಾಯಕರು ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಸಿ ರಾಮೋಜಿಗೌಡರ ಕುಟುಂಬ ಮತ್ತು ಊರಿನ ಹಿನ್ನೆಲೆಯನ್ನು ಆಧಾರ್ ಕಾರ್ಡ್ ಸಹಿತ ಬಹಿರಂಗಪಡಿಸಿದ್ದು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಕೊಟ್ಟಿದೆ.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯ ರಣಕಣದಿಂದ ಬಿಜೆಪಿಯ ಚುನಾವಣಾ ಸ್ಟ್ರಾಟೆಜಿಕ್ ಮಾಸ್ಟರ್ ಆರ್.ಎಸ್.ಎಸ್ ಮತ್ತು ಸಂಘ ಪರಿವಾರ ದೂರ ಉಳಿದಿದೆ. ಕಾರಣ ಅ. ದೇವೇಗೌಡರ ವಿರುದ್ಧ ಆರ್.ಎಸ್.ಎಸ್ ಗೆ ದೊಡ್ಡ ಅಸಮಧಾನವಿದೆ ಹಾಗೂ ಸಂಘ ಪರಿವಾರದ ಬೆಂಬಲಿತ ಅಭ್ಯರ್ಥಿ ಆನಂದ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಹುಸಿಯಾಗಿದ್ದು. ಹೀಗಾಗಿ ಆನಂದ್ ಅವರು ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದಾರೆ. ನಾಮಕಾವಾಸ್ತೆ ಬಿ.ಎಲ್ ಸಂತೋಷ್ ಜಿ ರಾಜೀ ಸಂಧಾನ ಮಾಡಿಸಿದ್ದರೂ, ಆನಂದ್ ಅವರ ಅಸಮಧಾನ ಹಾಗೂ ಸಂಘ ಪರಿವಾರ ಚುನಾವಣೆಯ ಅಂಕಣದಿಂದ ಬಹು ದೂರ ಉಳಿಸಿರುವುದು ಅತ್ಯಂತ ಸ್ಪಷ್ಟ.
ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಸಾಧಿಸಿದ ನಂತರ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಒಳಗೊಳಗೆ ಹೊಗೆಯಾಡುತ್ತಿದೆ. ಸೆಕ್ಯೂಲರ್ ಜೆಡಿಎಸ್ ಕಾರ್ಯಕರ್ತರ ಮತ್ತು ಹಿಂದುತ್ವದ ಬಿಜೆಪಿ ಕಾರ್ಯಕರ್ತರು ಹಾಗೂ ಮೊದಲು ಮತ್ತು ಎರಡನೇ ಸಾಲಿನ ನಾಯಕರು, ಈ ಬಾರಿಯ ಚುನಾವಣೆ ಪ್ರಚಾರದಲ್ಲಿ ಅಷ್ಟೇನೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿಲ್ಲ ಎಂಬ ಸಂಗತಿ ಎದ್ದು ತೋರುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ ನಾಯಕರು ಖುದ್ದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾದಿಯಾಗಿ ಉತ್ಸಾಹ ಅಬ್ಬರದಿಂದ ಪ್ರಚಾರದಲ್ಲಿ ತೊಡಗಿದ್ದಾರೆ. ದಶಕಗಳ ಹಿಂದೆಯೇ ಕೈ ಬಿಟ್ಟು ಹೋಗಿದ್ದ ಕ್ಷೇತ್ರವನ್ನು ಮತ್ತೆ ಪಡೆದುಕೊಳ್ಳಬೇಕು ಹಾಗೂ ಮೇಲ್ಮನೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಬೇಕು ಅನ್ನುವ ಉಮೇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಹೆಚ್ಚಾಗಿದೆ.
ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಹಿನ್ನೆಲೆಯೇ ಅತಿ ಮುಖ್ಯ. ಅ. ದೇವೇಗೌಡರು ಕಳೆದ 6 ವರ್ಷಗಳಿಂದ ಮುಖ್ಯ ವಾಹಿನಿಯಿಂದ ನಾಪತ್ತೆಯಾಗಿದ್ದ ಕಾರಣ ಎದುರಾಗಿರುವ ಆಡಳಿತ ವಿರೋಧಿ ಅಲೆ ಮತ್ತು ರಾಮೋಜಿ ಗೌಡರ ವೈಯಕ್ತಿಕ ವರ್ಚಸ್ಸು ಈ ಚಾನವಣೆಯಲ್ಲಿ ಮುಖ್ಯವಾಗಿ ಪರಿಗಣಿಸಲ್ಪಡುತ್ತಿದೆ. ರಾಮೋಜಿಗೌಡರಿಗೆ ಪದವೀಧರರ ಸಂಕಷ್ಟಗಳೇನು, ನಿರುದ್ಯೋಗಿಗಳ ಬವಣೆ ಏನು, ಶಿಕ್ಷಣ-ಕೌಶಲ್ಯ ಹೊಂದಿದ್ದರೂ ಅವಕಾಶ ವಂಚಿತರಾಗುವ ಹತಾಶೆ ಏನು ಅನ್ನುವುದು ಅರಿವಿದೆ ಹೀಗಾಗಿ ಅವರೇ ಗೆಲ್ಲಬೇಕು ಎಂದು ಕೆಲವು ಮತದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಾರಣ, ಶಿಕ್ಷಕ ವೃತ್ತಿಯಲ್ಲಿದ್ದು ನಿವೃತ್ತಿರಾಗಿ ರಾಜಕೀಯಕ್ಕೆ ಬಂದಿರುವ ರಾಮೋಜಿ ಗೌಡರು ನೂರಾರು ಶಿಕ್ಷಕರಿಗೆ ಹಲವು ರೀತಿಯಲ್ಲಿ ನೆರವು ನೀಡಿದ್ದಾರೆ. ಉದ್ಯೋಗ ಮೇಳ ನಡೆಸಿ ಸಾವಿರಾರು ನಿರುದ್ಯೋಗಿ ಪದವೀಧರರಿಗೆ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸಿದ್ದಾರೆ. ಸ್ವಂತ ಉದ್ಯಮ ಸ್ಥಾಪಿಸಿಕೊಳ್ಳುವ ಆಸಕ್ತಿ ಇದ್ದ ಅನೇಕರಿಗೆ ಆರ್ಥಿಕ ನೆರವು ನೀಡಿದ್ದಾರೆ. ಕಷ್ಟ ಎಂದು ಬಂದ ಯಾರನ್ನೂ ಅವರು ಸುಮ್ಮನೆ ಹಿಂದೆ ಕಳಿಸಿಲ್ಲ. ರಾಮೋಜಿ ಗೌಡರು ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎಂದು ಕೆಲವು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸುಮಾರು 70,000ದಷ್ಟು ಮತದಾರರ ನೋಂದಣಿ ಮಾಡಿಸಿರುವ ರಾಮೋಜಿಗೌಡರು, ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳ ಮಾಧ್ಯಮಗಳನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಮೊಬೈಲ್ ಆಪ್, ಮತದಾನ ಜಾಗೃತಿ, ನೇರ ಎಸ್.ಎಂ.ಎಸ್ ಮತ್ತು ವಾಯ್ಸ್ ಕಾಲ್ ಕಳಿಸುವುದು, ಟೆಲಿ ಕಾಲರ್ ಮೂಲಕ ಮತ ಪ್ರಚಾರ ಇತ್ಯಾದಿ ತಂತ್ರಗಾರಿಕೆಯನ್ನು ಅತ್ಯಂತ ಸಮರ್ಪಕವಾಗಿ ಮಾಡುತ್ತಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಕಣದಲ್ಲಿರುವ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟಕ್ಕೆ ತಲೆನೋವು ತಂದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಘಪರಿವಾರ ಹಿನ್ನೆಲೆಯ ಉದಯ್ ಸಿಂಗ್ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದೆಡೆ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಎಂ. ಪುಟ್ಟಸ್ವಾಮಿ ಸಹ ದೇವೇಗೌಡರು ಮತ್ತು ಕುಮಾರಸ್ವಾಮಿ ಭಾವಚಿತ್ರ ಬಳಸಿ ಪ್ರಚಾರ ಮಾಡುತ್ತಾ, ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ನೀಲಕಂಠ ಗೌಡ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೋಂದಣಿ ಮಾಡಿದ್ದು, ಇವರು ಸೆಳೆಯುವ ಮತಗಳು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಪೆಟ್ಟಿ ನೀಡುವ ಸಾಧ್ಯತೆಯಿದೆ.
ಮತದಾರರಿಗೆ 12 ವಾಗ್ದಾನ
ಪ್ರಣಾಳಿಕೆಯ ವಿಚಾರದಲ್ಲಿಯೂ ರಾಮೋಜಿ ಗೌಡರ ನಿಲುವು ಮತ್ತು ಸಂಕಲ್ಪಗಳು ಮತದಾರರನ್ನು ಸೆಳೆಯುತ್ತಿವೆ. ಅತ್ತ ಪ್ರಾಣಾಳಿಕೆಯ ಬದಲು ಅ. ದೇವೇಗೌಡರ ಹಳೆಯ ಕ್ಯಾಸೆಟ್ ಮತದಾರನ್ನು ನಿರಾಶೆಗೊಳಿಸಿದೆ.
ತಮ್ಮ ಪ್ರಣಾಳಿಕೆಯಲ್ಲಿ ಕೃತಕ ಬುದ್ದಿಮತ್ತೆ, ವರ್ಚುಯೆಲ್ ರಿಯಾಲಿಟಿ, ರೊಬೋಟಿಕ್ಸ್ ತಂತ್ರಜ್ಞಾನ, ಚಾಟ್ ಜಿಪಿಟಿ, ಡೇಟಾ ಸೈನ್ಸ್ ಮುಂತಾದ ಅತ್ಯಾಧುನಿಕ ತಾಂತ್ರಿಕ ಕೌಶಲ್ಯಗಳ ತರಬೇತಿ, ಪದವೀಧರ ಯುವಕ ಯುವತಿಯರಿಗೆ ತರಬೇತಿ ಶಿಬಿರ, ಉದ್ಯೋಗ ಮೇಳ, ಶಾಶ್ವತ ಸಹಾಯವಾಣಿ ಮುಂತಾದ ವಾಗ್ದಾನ ಮಾಡಿದ್ದಾರೆ ರಾಮೋಜಿ ಗೌಡರು. ಜೊತೆಗೆ ಪದವೀಧರರಿಗೆ ಪ್ರತ್ಯೇಕ ಕೋಆಪರೇಟೀವ್ ಸೊಸೈಟಿ ಸ್ಥಾಪನೆಯ ಚಿಂತನೆ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಪದವೀಧರರಿಗೆ ಉದ್ಯೋಗವಕಾಶ ಹೆಚ್ಚಿಸುವುದು, ನಿರುದ್ಯೋಗಿಗಳ ಉದ್ಯೋಗವಕಾಶಕ್ಕಾಗಿ ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಯ ಮೂರು ಜಿಲ್ಲೆಗಳಲ್ಲಿ ಪ್ರತಿ ವರ್ಷ ಉದ್ಯೋಗ ಮೇಳಗಳ ಆಯೋಜನೆ, ಸರ್ಕಾರದ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಕೌಶಲ್ಯ ತರಬೇತಿ ಕೇಂದ್ರಗಳ ಸ್ಫಾಪನೆ, ಮಾಹಿತಿ ಕೇಂದ್ರಗಳ ಸ್ಥಾಪನೆ, ಪರೀಕ್ಷಾ ಪೂರ್ವ ತರಬೇತಿ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ, ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ಅನುದಾನರಹಿತ, ಅನುದಾನಿತ ಮತ್ತು ಸರ್ಕಾರಿ ಶಿಕ್ಷಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದು, ವೈದ್ಯಕೀಯ ಮತ್ತು ತಾಂತ್ರಿಕ ಪದವೀಧರರ ಅಭ್ಯುದಯ, ಪದವೀಧರರ ಹೌಸಿಂಗ್ ಕೋ ಆಪರೇಟೀವ್ ಸಂಸ್ಥೆಗಳ ಸ್ಥಾಪನೆ, ಪದವೀಧರರ ಕೋ-ಆಪರೇಟೀವ್ ಬ್ಯಾಂಕ್ ಸ್ಥಾಪನೆ, ಪದವೀಧರ-ಶಿಕ್ಷಕ ಸಂಘಟನೆಗಳ ಬಲವರ್ಧನೆ, ಇತ್ಯಾದಿ ಸೇರಿದಂತೆ ರಾಮೋಜಿ ಗೌಡರ 12 ವಾಗ್ದಾನಗಳು ಹೆಚ್ಚು ಸದ್ದು ಮಾಡುತ್ತಿವೆ.
ಕೈ ಅಭ್ಯರ್ಥಿ ರಾಮೋಜಿ ಗೌಡರ ಹಿನ್ನೆಲೆ:
ಬೆಂಗಳೂರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಾಮೋಜಿ ಗೌಡರಿಗೆ ಇದು ನನ್ನ ಮೂರನೆಯ ಪ್ರಯತ್ನ. ಈ ಹಿಂದೆ ಒಂದು ಬಾರಿ ರಾಮಚಂದ್ರೇಗೌಡರು ಮತ್ತೊಂದು ಬಾರಿ ಅ. ದೇವೇಗೌಡರ ವಿರುದ್ಧ ಸೋಲು ಅನುಭವಿಸಿದ್ದ ರಾಮೋಜಿಗೌಡರು ಮತ್ತೆ ಹಿಂದೆ ಸರಿಯದೇ ಈ ಬಾರಿಯೂ ಚುನಾವಣ ರಣಕಣದಲ್ಲಿ ದೃಢವಾಗಿ ನಿಂತಿದ್ದಾರೆ. ರಾಮೋಜಿ ಗೌಡ ಅವರು ಕಾಂಗ್ರೆಸ್ ಅಭ್ಯರ್ಥಿ ಎಂದು ಬಹಳ ಹಿಂದೆಯೇ ಎಂದು ನಿರ್ಧಾರವಾಗಿದ್ದ ಕಾರಣ ಕಳೆದ ಆರೇಳು ತಿಂಗಳಿಂದ ಅವರು ಸಕ್ರಿಯರಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ.
ಕೆಳ ಮಧ್ಯಮವರ್ಗದ ರೈತಾಪಿ ಕುಟುಂಬದಲ್ಲಿ ಜನಿಸಿದವ ರಾಮೋಜಿ ಗೌಡರು, ಹಲವು ವರ್ಷಗಳ ಕಾಲ ಶಿಕ್ಷಕನಾಗಿ ದುಡಿದು, ಶಿಕ್ಷಕರ ಪರದಾಟಗಳನ್ನೂ ನೋಡಿದವು. ನಂತರ ಸ್ವಯಂ ನಿವೃತ್ತಿ ಪಡೆದು ಉದ್ಯಮ ಸ್ಥಾಪಿಸಿ, ಅನೇಕ ವರ್ಷಗಳ ದುಡಿದು ರಾಜಕೀಯ ರಂಗ ಪ್ರವೇಶೀಸಿದರು. ಈವರೆಗೆ ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ಕೊಡಿಸಿರುವ ರಾಮೋಜಿ ಗೌಡರು ಇದನ್ನೇ ತಮ್ಮ ಶ್ರೀರಕ್ಷೆ ಎಂದುಕೊಂಡಿದ್ದಾರೆ.
ದೇಶ ಕಟ್ಟುವ ಅಗಾಧ ಸಾಮರ್ಥ್ಯವಿರುವ ಯುವಶಕ್ತಿಗೆ ಬದ್ಧತೆ ಮತ್ತು ಭರವಸೆ ಬೇಕಿದೆ. ದುಡಿಯುವ ಉತ್ಸಾಹ ಇರುವ ಕೈಗಳಿಗೆ ಕೆಲಸ ಕೊಡಿಸಬೇಕಿದೆ. ಸಾಮಾನ್ಯ ಪದವಿ ಪಡೆದುಕೊಂಡ ಮನಸುಗಳನ್ನು ಕ್ರಿಯಾಶೀಲಗೊಳಿಸಲು ಕೌಶಲ್ಯ ಬೇಕಿದೆ. ಶಿಕ್ಷಣ ಮತ್ತು ಕೌಶಲ್ಯ ಎರಡೂ ಇರುವ ಯುವಕರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಮತ್ತು ಸಮರ್ಪಕ ಮಾರ್ಗವನ್ನು ತೋರಿಸುವ ಕೆಲಸ ಆಗಬೇಕಿದೆ. ನಮ್ಮ ಯುವ ಸಮುದಾಯದ ಪದವೀಧರ ನಿರುದ್ಯೋಗಿಗಳು ಅವಕಾಶ ವಂಚಿತರಾಗಬಾರದು. ನಮ್ಮ ರಾಜ್ಯದ ಯುವಕ ಯುವತಿಯರ ಭವಿಷ್ಯ ಉಜ್ವಲವಾಗಬೇಕು. ಇದೇ ಕಾರಣದಿಂದ ನಾನು ಪರಿಷತ್ ಚುನಾವಣೆ ಸ್ಪರ್ಧಿಸುತ್ತಿದ್ದೇನೆ ಎನ್ನುತ್ತಾರೆ ರಾಮೋಜಿ ಗೌಡರು.
ರಾಮೋಜಿ ಗೌಡರ ದೂರದೃಷ್ಟಿಯ ಸಮಗ್ರ ಅಭಿವೃದ್ಧಿ ಪ್ರಣಾಳಿಕೆ:
ಪದವೀಧರ ನಿರುದ್ಯೋಗಿಗಳಿಗಾಗಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಮತ್ತು ನಿರುದ್ಯೋಗಿ ಪದವೀಧರರ ನೋಂದಣಿ ಹಾಗೂ ತರಬೇತಿ ಶಿಬಿರಗಳನ್ನು ಆಯೋಜನೆ.
ಸಾಧಾರಣ ವೃತ್ತಿಪರ ಕಲಿಕಾ ಕೋರ್ಸ್ ಗಳಾದ ಟ್ಯಾಲಿ, ಆಟೋ-ಕ್ಯಾಡ್, ಹಾರ್ಡ್ ವೇರ್ ನೆಟ್ವರ್ಕಿಂಗ್, ಗ್ರಾಫಿಕ್ಸ್, ವಿಎಫ್ಎಕ್ಸ್ ಸ್ಪೆಷಲ್ ಎಫೆಕ್ಸ್, ಜೊತೆಗೆ ವಿಶೇಷ ಕೌಶಲ್ಯ ಕೋರ್ಸ್ ಗಳಾದ ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ (ಎಐ) ಮತ್ತು ವರ್ಚುಯೆಲ್ ರಿಯಾಲಿಟಿ (ವಿಆರ್), ಚಾಟ್ ಜಿಪಿಟಿ ಹಾಗೂ ಟೈಮ್ ಮ್ಯಾನೇಜ್ಮೆಂಟ್ ಕಲಿಕೆಗಳು ಸೇರಿದಂತೆ ಇಂದಿನ ಆಧುನಿಕ ಯುಗದಲ್ಲಿ ಅಗತ್ಯವಾಗಿರುವ ಎಲ್ಲಾ ತರಹದ ತರಬೇತಿ ಶಿಬಿರ ಆಯೋಜನೆ.
ಪದವೀಧರ ನಿರುದ್ಯೋಗಿಗಳು, ಹೊಸ ಉದ್ಯೋಗಾಕಾಂಕ್ಷಿಗಳು, ಮತ್ತು ಈಗಾಗಲೇ ವೃತ್ತಿಯಲ್ಲಿದ್ದು ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಬಯಸುವ ವೃತ್ತಿಪರರು ಹಾಗೂ ಸಂಸ್ಥೆಗಳಿಗೆ ಅನುಕೂಲವಾಗಲೆಂದು ಪೂರ್ಣ ಪ್ರಮಾಣದ ಪ್ರತ್ಯೇಕ ಸಹಾಯವಾಣಿ ಕೇಂದ್ರ ಸ್ಥಾಪನೆ.
ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಉದ್ಯೋಗ ಮಾಹಿತಿ, ಐಟಿ-ಬಿಟಿ, ಸಾಫ್ಟ್ ವೇರ್, ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಆಟೋಮೊಬೈಲ್ಸ್, ಮೊಬೈಲ್ ಕಮ್ಯುನಿಕೇಶನ್, ರಿಯಲ್ ಎಸ್ಟೇಟ್, ಆತಿಥ್ಯ ಕ್ಷೇತ್ರ ಹಾಗೂ ವೈದ್ಯಕೀಯ ಕ್ಷೇತ್ರ ಸೇರಿದಂತೆ ಯಾವುದೇ ವೃತ್ತಿಪರ ಕ್ಷೇತ್ರಗಳಲ್ಲಿ ಉದ್ಯೋಗವಕಾಶ ಕುರಿತಾದ ವಿಶೇಷ ಅತ್ಯಾಧುನಿಕ ಮತ್ತು ಸುಲಭವಾಗಿ ಮಾಹಿತಿ ಲಭ್ಯವಾಗುವಂತೆ ಡೇಟಾಬೇಸ್ ಸಿದ್ಧಪಡಿಸುವುದು.
ಹೊಸ ಉದ್ಯೋಗ, ಉದ್ಯಮ, ಸಾಲ ಸೌಲಭ್ಯ, ಸ್ಟಾರ್ಟ್ ಅಪ್ ಮಾಹಿತಿ, ಎಂಎಸ್‌ಎಂಇ ಯೋಜನೆ, ಮುದ್ರಾ ಹಾಗೂ ಇನ್ನಿತರೆ ಕಿರು ಸಾಲ ಸೌಕರ್ಯಗಳು ಮುಂತಾದ ಮಾಹಿತಿಗಳನ್ನು ಒದಗಿಸುವುದು.
ಈ ಸಂಬಂಧ ಪ್ರತ್ಯೇಕ ಸಹಾಯವಾಣಿ ನಂಬರ್, ವೆಬ್ ಸೈಟ್, ವಾಟ್ಸ್ ಆಪ್ ಗ್ರೂಪ್, ಸಾಮಾಜಿಕ ಜಾಲತಾಣದ ಪುಟಗಳು, ಇಮೇಲ್ ವಿಳಾಸವನ್ನು ನೀಡುವುದು.
ಪದವೀಧರರು ನೋಂದಾಯಿಸಲ್ಪಟ್ಟ ವಾಟ್ಸ್ ಆಪ್ ನಂಬರ್ ಗೆ ಕಾಲಕಾಲಕ್ಕೆ ಉದ್ಯೋಗವಕಾಶ, ಉದ್ಯಮ ಅವಕಾಶ, ವೃತ್ತಿಪರ ಕೋರ್ಸುಗಳು ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳ ಅವಕಾಶಗಳ ಕುರಿತಾದ ಮಾಹಿತಿ ಸಂದೇಶ ಕಳಿಸಲಾಗುವುದು.
ಪದವೀಧರರ ಭವಿಷ್ಯ ನಿಧಿ, ಸುಭದ್ರ ಠೇವಣಿ ಯೋಜನೆ, ಮಕ್ಕಳ ವಿದ್ಯಾಭ್ಯಾಸ ಸಾಲ, ವೈದ್ಯಕೀಯ ಸಾಲ ಇತ್ಯಾದಿ ಉದ್ದೇಶಗಳಿಗಾಗಿ ಪ್ರತ್ಯೇಕ ಪದವೀಧರರ ಕೋ ಆಪರೇಟೀವ್ ಸೊಸೈಟಿ ಸ್ಥಾಪಿಸುವ ಯೋಜನೆ.
ಬೆಂಗಳೂರು ಪದವೀಧರ ವಿಧಾನ ಪರಿಷತ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರದ ಪದವೀಧರ ಮತ್ತು ಶಿಕ್ಷಕ ಮತದಾರರನ್ನು ಶೇರುದಾರರನ್ನಾಗಿಸಿ ಪ್ರತ್ಯೇಕ ಕೋ ಆಪರೇಟೀವ್ ಬ್ಯಾಂಕ್ ಆರಂಭಿಸುವ ಚಿಂತನೆ.
ಈ ಕೋ ಆಪರೇಟೀವ್ ಬ್ಯಾಂಕ್ ನ ಮೂಲ ಉದ್ದೇಶ ಪದವೀಧರ ಕ್ಷೇತ್ರದ ನೋಂದಾಯಿತ ಮತದಾರರ ಜೀವನದ ಪ್ರತೀ ಸಂತಸ ಮತ್ತು ಸಂಕಷ್ಟದ ಸಂದರ್ಭದಲ್ಲಿ ಭರವಸೆ ನೀಡಬಲ್ಲ ಹಣಕಾಸಿನ ಸಂಸ್ಥೆ ನಿರ್ಮಿಸುವುದು.
ಅತ್ಯಂತ ಕಡಿಮೆ ಬಡ್ಡಿ ಧರದಲ್ಲಿ ಸಾಲ ಸೌಕರ್ಯ, ಮೈಕ್ರೋ ಫೈನಾನ್ಸ್, ಹೆಚ್ಚಿನ ಧರದಲ್ಲಿ ಉಳಿತಾಯ ಬಡ್ಡಿ ನೀಡುವ ಮೂಲಕ ಆರ್ಥಿಕ ಸದೃಢತೆಗೆ ನೆರವಾಗುವುದು.
ರಾಮೋಜಿ ಗೌಡರ ಗೆಲುವನ್ನು ದೃಢಪಡಿಸಿದ್ಯಾ ಗುಪ್ತಚರ ವರದಿ?
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವ ಆಂತರಿಕ ಸಮೀಕ್ಷೆಯನ್ನು ಹೊರತುಪಡಿಸಿ, ಗುಪ್ತಚರ ಇಲಾಖೆಯೂ ಸಹ ರಾಮೋಜಿ ಗೌಡರು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿ ನೀಡಿದೆ. ನಾಮಪತ್ರ ಸಲ್ಲಿಕೆಯಾದ ನಂತರದ ದಿನದಿಂದಲೂ ರಾಮೋಜಿಗೌಡರ ಅಬ್ಬರದ ಚುನಾವಣಾ ಪ್ರಚಾರ ಒಂದು ಕಡೆಯಾದರೇ, ಮುಖ್ಯಮಂತ್ರಿಯವರು ಮಾಧ್ಯಮಗಳಲ್ಲಿ ರಾಮೋಜಿಗೌಡರ ಪರವಾದ ಮಾತುಗಳನ್ನಾಡಿರುವುದು ರಾಮೋಜಿಗೌಡರಿಗೆ ಸಕಾರಾತ್ಮಕ ಫಲಿತಾಂಶ ಕೊಟ್ಟಿದೆ. ಗುಪ್ತಚರ ಇಲಾಖೆಯ ವರದಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹಿತ ಕಾಂಗ್ರೆಸ್ ನಾಯಕರು ವಿಧಾನಪರಿಷತ್ ಚುನಾವಣೆ ಫಲಿತಾಂಶಕ್ಕೂ ಮೊದಲೇ ಸಂಭ್ರಮ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.