ನವದೆಹಲಿ: ಲಡಾಕ್‍ನ ಗಾಲ್ವಾನ್ ಗಡಿಯಲ್ಲಿ ಕಾಲು ಕೆರೆದು ಘರ್ಷಣೆ ನಡೆಸಿದ್ದಲ್ಲದೆ ಭಾರತೀಯ ಯೋಧರ ಹತ್ಯೆ ಮಾಡಿದ್ದ ಚೀನಾ, ಭಾರತೀಯರ ಆಕ್ರೋಶಕ್ಕೆ ಬೆದರಿದಂತೆ ಕಾಣುತ್ತಿದೆ.
ಸೋಮವಾರ ಸಂಜೆ ಗಾಲ್ವನ್ ಗಡಿಯ ವಾಸ್ತವ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದ ಚೀನಾ ಸೇನೆ, ಭಾರತೀಯ ಸೇನೆ ಮೇಲೆ ಗುಂಡಿನ ಚಕಮಕಿ ನಡೆಸಿ 20 ಯೋಧರನ್ನು ಹತ್ಯೆ ಮಾಡಿತ್ತು. ಚೀನಾದ ಉದ್ಧಟತನಕ್ಕೆ ದೇಶದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚೀನಾ ಆಪ್ ಸೇರಿದಂತೆ ಚೀನಾ ನಿರ್ಮಿತ ವಸ್ತುಗಳ ವಸ್ತುಗಳ ಬಹಿಷ್ಕಾರಕ್ಕೆ ಆಂದೋಲನವೇ ಆರಂಭವಾಗಿದೆ.
ಈ ಬೆಳವಣಿಗೆಗಳಿಂದ ಸ್ವಲ್ಪ ಮೆತ್ತಗಾಗಿರುವ ಚೀನಾ, ಸೇನಾ ಮುಖ್ಯಸ್ಥರ ಹಂತದ ಮಾತುಕತೆಗೆ ಒಪ್ಪಿತ್ತು. ಗುರುವಾರ ಭಾರತ ಹಾಗೂ ಚೀನಾ ಸೇನೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳು ಮೂರು ಸುತ್ತಿನ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ ತನ್ನ ವಶದಲ್ಲಿಟ್ಟುಕೊಂಡಿದ್ದ 10 ಮಂದಿ ಭಾರತೀಯ ಯೋಧರನ್ನು ಬಿಡುಗಡೆ ಮಾಡಲು ಚೀನಾ ಒಪ್ಪಿಕೊಂಡಿತ್ತು.
ಮತುಕತೆ ವೇಳೆ ನೀಡಿದ ಭರವಸೆಯಂತೆ ಇಂದು ಇಬ್ಬರು ಅಧಿಕಾರಿಗಳು ಸೇರಿದಂತೆ 10 ಮಂದಿ ಯೋಧರನ್ನು ಚೀನಾ ಸೇನೆ ಬಿಡುಗಡೆ ಮಾಡಿದೆ. ಬಿಡುಗಡೆಯಾದ ಎಲ್ಲಾ ಯೋಧರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ.
ಗಾಲ್ವನ್ ಘರ್ಷಣೆ ಬಳಿಕ ಭಾರತದ ಯಾವ ಯೋಧರೂ ಕಣ್ಮರೆಯಾಗಿಲ್ಲ. ಎಲ್ಲರ ಪಟ್ಟಿಯೂ ನಮ್ಮ ಬಳಿ ಇದೆ ಎಂದು ಭಾರತೀಯ ಸೇನಾ ವಕ್ತಾರರು ತಿಳಿಸಿದ್ದರು. ಆದರೆ, ಇಂದು ಚೀನಾ ವಶದಲ್ಲಿದ್ದ 10 ಯೋಧರು ಬಿಡುಗಡೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.