ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರಕ್ಕೆ 57,128 ಕೋಟಿ ರೂಪಾಯಿ ಡಿವಿಡೆಂಡ್ ನೀಡುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನಿಸಿದೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕೇಂದ್ರೀಯ ಮಂಡಳಿ ಸಭೆಯಲ್ಲಿ ಕಂಟಿನ್ಜೆನ್ಸಿ ರಿಸ್ಕ್ ಬಫರ್ ಅನ್ನು ಶೇಕಡ 5.5 ರ ಮಟ್ಟದಲ್ಲಿ ಸ್ಥಿರೀಕರಿಸುವುದಕ್ಕೂ ತೀರ್ಮಾನಿಸಲಾಗಿದೆ.
ಪ್ರಸ್ತುತ ಆರ್ಥಿಕ ಸ್ಥಿತಿಗತಿಯನ್ನು ಅವಲೋಕಿಸಿದ ಕೇಂದ್ರೀಯ ಮಂಡಳಿ, ಜಾಗತಿಕ ಮತ್ತು ಪ್ರಾದೇಶಿಕ ಸವಾಲುಗಳ ಬಗ್ಗೆಯೂ ಗಮನಹರಿಸಿದೆ. ಆರ್ಬಿಐ ತೆಗೆದುಕೊಂಡ ವಿತ್ತೀಯ ಮತ್ತು ನಿಯಂತ್ರಕ ಹಾಗೂ ಇತರೆ ಕ್ರಮಗಳನ್ನೂ ಪರಾಮರ್ಶಿಸಿದೆ. ಒಂದು ಇನ್ನೋವೇಶನ್ ಹಬ್ ಸ್ಥಾಪಿಸುವ ಬಗ್ಗೆಯೂ ಮಂಡಳಿ ಚರ್ಚೆ ನಡೆಸಿದಿದ್ದು, ವಿವಿಧ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್ ವಹಿವಾಟು ಕಳೆದ ಹಣಕಾಸು ವರ್ಷದಲ್ಲಿ ಹೇಗಾಗಿತ್ತು ಎಂಬುದನ್ನೂ ಅವಲೋಕಿಸಿದ ಮಂಡಳಿ, ವಾರ್ಷಿಕ ವರದಿಯನ್ನು ಮತ್ತು ಲೆಕ್ಕಪತ್ರಗಳನ್ನು ಅಂಗೀಕರಿಸಿತು ಎಂದು ಆರ್ಬಿಐ ತಿಳಿಸಿದೆ.








