ಭಾರತೀಯ ಯೋಧರ ಹತ್ಯೆಗೆ ಪ್ರತಿಕಾರ ತೀರಿಸಿಕೊಂಡ ಭದ್ರತಾ ಪಡೆ – ಎಲ್‌ಇಟಿ ಕಮಾಂಡರ್ ಸೇರಿ ಇಬ್ಬರ ಹತ್ಯೆ
ಬಾರಾಮುಲ್ಲಾ, ಅಗಸ್ಟ್ 18: ಬಾರಾಮುಲ್ಲಾದಲ್ಲಿ ನಡೆದ ಭದ್ರತಾ ಪಡೆಯ ಎನ್ ಕೌಂಟರ್ ಗೆ ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಬಲಿಯಾಗಿದ್ದಾನೆ.
ಬಾರಾಮುಲ್ಲಾ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸಜ್ಜದ್ ಅಲಿಯಾಸ್ ಹೈದರ್ ಹತ್ಯೆಯಾಗಿದ್ದಾನೆ ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ವಿಜಯ್ ಕುಮಾರ್ ಸೋಮವಾರ(ಅಗಸ್ಟ್ 17) ತಿಳಿಸಿದ್ದಾರೆ. ಇದು ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ದೊಡ್ಡ ಸಾಧನೆಯಾಗಿದೆ ಎಂದು ಕುಮಾರ್ ಹೇಳಿದ್ದಾರೆ.

ಈವರೆಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಒಂದು ಎಕೆ ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂರನೇ ಭಯೋತ್ಪಾದಕನ ಶೋಧ ನಡೆಯುತ್ತಿದೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ತಿಳಿಸಿದೆ.
ಬಾರಾಮುಲ್ಲಾ ಜಿಲ್ಲೆಯ ಕ್ರೇರಿ ಪ್ರದೇಶದಲ್ಲಿ ಭದ್ರತಾ ಪಡೆಯ ಚೆಕ್ ಪಾಯಿಂಟ್ ಮೇಲೆ ಮೂವರು ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಮತ್ತು ಒಬ್ಬ ಪೊಲೀಸ್ ಅಧಿಕಾರಿ ಹುತಾತ್ಮರಾದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಪೊಲೀಸರ ವರದಿ ಪ್ರಕಾರ ಭದ್ರತಾ ಪಡೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಕೂಡ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ. ಕಾಶ್ಮೀರ ಐಜಿಪಿ ಈ ಮೊದಲು ಲಷ್ಕರ್-ಎ-ತೈಬಾ (ಎಲ್‌ಇಟಿ) ಗೆ ಸೇರಿದ ಮೂವರು ಭಯೋತ್ಪಾದಕರು ಕ್ರೆರಿ ಪ್ರದೇಶದಲ್ಲಿ ಭದ್ರತಾ ಪಡೆಯ ಮೇಲೆ ದಾಳಿ ನಡೆಸಿದ ನಂತರ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ನಾವು ಭಯೋತ್ಪಾದಕರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತೇವೆ ಎಂದು ಹೇಳಿದ್ದರು.








