ವೈಜ್ಞಾನಿಕ ಮನೋಧರ್ಮದ ಪ್ರಸಾರಕ್ಕಾಗಿ ಕೊನೆಯುಸಿರಿರುವವರೆಗೂ ಶ್ರಮಿಸಿದ ಹಿರಿಯ ವಿಜ್ಞಾನಿ ವೈಸಿ.ಸುಬ್ರಮಣ್ಯ ತಡರಾತ್ರಿ ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜ್ಞಾನ ಚಳುವಳಿ, ವಿಜ್ಞಾನ-ತಂತ್ರಜ್ಞಾನದ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ. 95 ವರ್ಷದ ಸುಬ್ರಮಣ್ಯ ಅವರು 1940-50ರ ದಶಕದಲ್ಲಿ ವಿಜ್ಞಾನ-ತಂತ್ರಜ್ಞಾನ ಶಿಕ್ಷಣ ಪಡೆದು ದೇಶದ ಕೈಗಾರಿಕೀಕರಣಕ್ಕಾಗಿ ದುಡಿದ ಮೊದಲ ಪೀಳಿಗೆಯ ವಿಜ್ಞಾನಿ-ತಂತ್ರಜ್ಞಾನಿ.
1947ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ ಮಾಡಿ 1948ರಲ್ಲಿ ಭಾರತ ವಿಜ್ಞಾನ ಸಂಸ್ಥೆಯಲ್ಲಿ ಮೆಟಲರ್ಜಿ ಇಂಜಿನೀಯರಿಂಗ್ ಮಾಡಿ ಉನ್ನತ ಶಿಕ್ಷಣ ಪಡೆದುಕೊಂಡರು. ಸುಬ್ರಮಣ್ಯ ಅವರು ರಕ್ಷಣಾ ಇಲಾಖೆಯ ಸಾರ್ವಜನಿಕ ಕ್ಷೇತ್ರದದಲ್ಲಿ ಶಸ್ತ್ರಾಸ್ತ್ರ ತಯಾರಿಕಾ ವಿಭಾಗದಲ್ಲಿ ಹಲವು ಆರ್ಡಿನೆನ್ಸ್ ಕಾರ್ಖಾನೆಗಳಲ್ಲಿ ಲೋಹಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಸುಬ್ರಮಣ್ಯ ಡೆಪ್ಯುಟಿ ಡೈರೆಕ್ಟರ್ ಜನರಲ್ ಹುದ್ದೆಯನ್ನೂ ಅಲಂಕರಿಸಿದ್ದರು.
1940ರ ದಶಕದಿಂದಲೇ ಸ್ವಾತಂತ್ರ್ಯ ಮತ್ತು ಎ.ಐ.ಎಸ್.ಎಫ್. ಚಳುವಳಿಯಿಂದ ಪ್ರಭಾವಿತರಾಗಿದ್ದ ಅವರು ಸುಬ್ರಮಣ್ಯ ಅವರು ಅತೀವ ಸಾಮಾಜಿಕ ಕಾಳಜಿ ಹೊಂದಿದ್ದರು. ತೀವ್ರ ಅನಾರೋಗ್ಯದ ಮಧ್ಯೆಯು ಇತ್ತೀಚಿನ ಸಿಎಎ-ವಿರೋಧಿ ಹೋರಾಟದಲ್ಲಿ ಸುಬ್ರಮಣ್ಯ ಅವರು ಭಾಗವಹಿಸಿದ್ದರು. ಇದೀಗ ಅವರ ನಿಧನಕ್ಕೆ ಅವರ ಅಭಿಮಾನಿ ಬಳಗವೇ ಕಂಬನಿ ಮಿಡಿದಿದೆ.








