ಶಿವಮೊಗ್ಗ : ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ಮಾತ್ರ ನೀಡಲಾಗುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಾರ್ಡ್ ಗೆ ಒಬ್ಬರಿಗೆ ಉದ್ಯೋಗ ಎಂಬ ನಿರ್ಬಂಧವಿಲ್ಲ. ಒಂದು ಕುಟುಂಬದ ಅರ್ಹ ಸದಸ್ಯರೆಲ್ಲರೂ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಕಾರ್ಡ್ ನೀಡಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
“ಸಿದ್ದರಾಮಯ್ಯ ಒಂದು ಕುಟುಂಬದ ಜಾಬ್ ಕಾರ್ಡ್ ಗೆ ಒಬ್ಬರಿಗೆ ಉದ್ಯೋಗ ನೀಡುತ್ತಿದ್ದಾರೆ. ಉಳಿದವರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ನೀಡುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿದ ಈಶ್ವರಪ್ಪ, ಸಿದ್ದರಾಮಯ್ಯನವರು ನರೇಗಾದ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಮತ್ತು ಆದಾಯ ತೆರಿಗೆದಾರರನ್ನು ಹೊರತುಪಡಿಸಿ ಯಾರು ಬೇಕಾದರೂ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಜನರು ಉದ್ಯೋಗಕ್ಕಾಗಿ ಮುಂದೆ ಬರುತ್ತಿದ್ದು, 15 ದಿನಗಳ ಒಳಗಾಗಿ ಕೂಲಿ ಮೊತ್ತವನ್ನು ಪಾವತಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.








