ಜೈಲಿಗೆ ಹಾಕಿದ್ರೂ ಪರವಾಗಿಲ್ಲ, ಆಂದೋಲನ ಮಾಡಿಯೇ ಬಿಡೋಣ : ಸಿದ್ದರಾಮಯ್ಯ
ಬೆಂಗಳೂರು : ಯಡಿಯೂರಪ್ಪನಂಥ ಹೊಣೆಗೇಡಿ ಸಿಎಂ ಮತ್ತೊಬ್ಬರಿಲ್ಲ. ನಾನು ಸಿಎಂಗೆ 12 ಪತ್ರ ಬರೆದರೂ ಒಂದಕ್ಕೂ ಉತ್ತರ ಕೊಡ್ಲಿಲ್ಲ.
ಕೇಂದ್ರದಲ್ಲಿ ಕೂಡ ಇದೇ ಪರಿಸ್ಥಿತಿ ಇದೆ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಡಿಸಿಗಳ ಜೊತೆ ವಿಡಿಯೋ ಸಂವಾದಕ್ಕೆ ಸರ್ಕಾರ ಅವಕಾಶ ಕೊಟ್ಟಿಲ್ಲ.
ಆ ಮೂಲಕ ನನ್ನ ಹಕ್ಕು ಚ್ಯುತಿಯಾಗಿದೆ. ವಿರೋಧ ಪಕ್ಷದ ನಾಯಕ ಶ್ಯಾಡೋ ಸಿಎಂ ಇದ್ದಂತೆ. ಕೊರೊನಾ ನಿಯಂತ್ರಣ ಸಂಬಂಧ ಸರಿಯಾದ ವ್ಯವಸ್ಥೆ ಮಾಡುವುದಕ್ಕೆ ಆಗಿಲ್ಲ.
ಇದರ ಬಗ್ಗೆ ಮಾಹಿತಿ ಪಡೆಯೋಣ ಅಂದ್ರೇ ಅವಕಾಶ ಕೊಡ್ತಿಲ್ಲ. ಪ್ರಜಾಪ್ರಭುತ್ವ ಕೊಲೆಗೇಡಿ ಸರ್ಕಾರ ಇದು. ನನ್ನ ಹಕ್ಕು ಚ್ಯುತಿಯಾಗಿದ್ದು, ಈ ಸಂಬಂಧ ನಾನು ಹಕ್ಕು ಚ್ಯುತಿ ಮಂಡನೆ ಮಾಡಲಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಸಿಎಂ ಘೋಷಿಸಿದ ವಿಶೇಷ ಪ್ಯಾಕೇಜ್ ಬಗ್ಗೆ ಕಿಡಿಕಾರಿದ ಸಿದ್ದರಾಮಯ್ಯ, ಕೇರಳದಂತ ಸಣ್ಣ ರಾಜ್ಯ ಕೊರೊನಾಗೆ 20 ಸಾವಿರ ಕೋಟಿ ಇಟ್ಟಿದ್ದಾರೆ. ನಮ್ಮಲ್ಲಿ ಹೆಸರಿಗೆ ಮಾತ್ರ ಪ್ಯಾಕೇಜ್ ಕೊಟ್ಟಿದ್ದಾರೆ. ಅದನ್ನು ಪ್ರಶ್ನೆ ಮಾಡಿದ್ರೆ ಬಂಧನ ಮಾಡ್ತಾರೆ ಎಂದು ಟೀಕಿಸಿದರು.
ಯಾರು ಹೆದರಬೇಡಿ, ಜೈಲಿಗೆ ಹಾಕಿದ್ರೂ ಪರವಾಗಿಲ್ಲ. ಅದೊಂದು ಆಂದೋಲನ ಮಾಡಿಯೇ ಬಿಡೋಣ. ಕೊರೊನಾ ಎರಡನೇ ಅಲೆ ಬಹಳ ವೇಗವಾಗಿ ಹರಡುತ್ತಿದೆ.
ಮೊದಲನೇ ಅಲೆ ನಗರ ಪ್ರದೇಶದಲ್ಲಿತ್ತು. ಈಗ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಇದಕ್ಕೆ ಕಾರಣ ಸರ್ಕಾರದ ವೈಪಲ್ಯ. ಸರ್ಕಾರ ಸರಿಯಾದ ಟೆಸ್ಟಿಂಗ್ ಮಾಡುತ್ತಿಲ್ಲ. ವೈದ್ಯಕೀಯ ವ್ಯವಸ್ಥೆ ಸರಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.








