ಬೆಳಗಾವಿ: ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕೋಡಿಮಠದ ಶ್ರೀ ಅವರು ಹೇಳಿದ್ದ ಭವಿಷ್ಯದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಿಎಂ ಆಗುವ ಸಾಧ್ಯತೆ ಇದೆ ಎಂಬ ಭವಿಷ್ಯದ ವಿರುದ್ಧ ಗರಂ ಆಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಾರಾಗಬೇಕು ಎಂಬುವುದು ಹಾದಿ, ಬೀದಿಯಲ್ಲಿ ಚರ್ಚೆ ಮಾಡುವ ವಿಷಯವಲ್ಲ ಎಂದಿದ್ದಾರೆ.
ಧೀಮಂತ ಮತ್ತು ಗಟ್ಟಿ ನಾಯಕತ್ವ ಸಿದ್ದರಾಮಯ್ಯನವರಿಗೆ (CM Siddaramaiah) ಇದೆ. ಹೀಗಾಗಿ ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎನ್ನುತ್ತಾರೋ, ಅಲ್ಲಿಯವರೆಗೆ ನಮ್ಮ ಶಾಸಕರ ಬೆಂಬಲ ಅವರಿಗೆ ಇರುತ್ತದೆ ಎಂದಿದ್ದಾರೆ.
ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿರುವ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಆ ಚರ್ಚೆ ಎಲ್ಲಾ ನಗಣ್ಯ. ಮುಡಾ ಹಗರಣದಲ್ಲಿ (MUDA Scam) ಬಿಜೆಪಿಯವರು ಸುಳ್ಳು ದಾಖಲೆ ಹುಟ್ಟಿಸಿ ಆರೋಪ ಮಾಡುತ್ತಿದ್ದಾರೆ. 135 ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತ ಸಂದರ್ಭದಲ್ಲಿ, ಇದೆಲ್ಲಾ ಬಾಲಿಷ. ಈ ವಿಷಯವಾಗಿ ನಾನು ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ.
ನಾನು ಓರ್ವ ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳುತ್ತಿದ್ದು, ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ. ಗಲ್ಲಿಯಲ್ಲಿ ಮಾತನಾಡುವ ವಿಷಯಗಳು ಇವಲ್ಲ ಎಂದು ಪರೋಕ್ಷವಾಗಿ ತಮ್ಮದೇ ನಾಯಕರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.