ಚಂಡೀಗಢ: ಮಗನನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ತಾಯಿ ತಮ್ಮ 58ನೇ ವರ್ಷದಲ್ಲಿ ಗರ್ಭಿಣಿಯಾಗಿದ್ದಾರೆ.
ಹೀಗಾಗಿ ಸಿಧು ಮೂಸೆವಾಲಾ ಅವರ ಪೋಷಕರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಮಾರ್ಚ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಮೂಲಕ ಬಲ್ಕೌರ್ ಸಿಂಗ್ 60ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಮೂಸೆವಾಲಾ ಪಾಲಕರಿಗೆ ಒಬ್ಬನೇ ಮಗನಾಗಿದ್ದ. 2022ರಲ್ಲಿ ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದರು. ಹತ್ಯೆಗೂ ಹಿಂದಿನ ದಿನ ಮೂಸೆವಾಲಾ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿತ್ತು. ಸಿಧು ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಹಾಗೂ ಸ್ನೇಹಿತರು ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದರು. ಕೊಲೆಯ ಹಿಂದೆ ಗ್ಯಾಂಗ್ಸ್ಟರ್ ಲಾರೆನಸ್ ಬಿಶ್ನೋಯಿ ಅವರ ತಂಡದ ಕೈವಾಡವಿದೆ ಎಂದು ಹೇಳಲಾಗಿತ್ತು.
ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಗ್ಯಾಂಗ್ನ ಸದಸ್ಯರಾದ ಶಾರ್ಪ್ ಶೂಟರ್ ಅಂಕಿತ್, ಸಚಿನ್ ಭಿವಾನಿ ಎನ್ನುವ ಪ್ರಮುಖ ಆರೋಪಿಗಳನ್ನು ಮೊದಲು ಬಂಧಿಸಲಾಗಿತ್ತು. ನಂತರ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ಜಗ್ಗು ಭಗವಾನ್ ಪುರಿಯಾ ಸೇರಿದಂತೆ 32 ಆರೋಪಿಗಳ ವಿರುದ್ಧ ತಂಡವು ಆರೋಪಪಟ್ಟಿ ಸಲ್ಲಿಸಲಾಗಿತ್ತು.