ಹೈದರಾಬಾದ್ ನಗರದ ಜನದಟ್ಟಣೆಯ ಪ್ರಮುಖ ಪ್ರದೇಶಗಳಲ್ಲಿ ಸ್ಕೈವಾಕರ್ ಗಳನ್ನು ನಿರ್ಮಾಣ ಮಾಡಲು ತೆಲಂಗಾಣ ಸರ್ಕಾರ ಮುಂದಾಗಿದೆ.
ಇದರ ಭಾಗವಾಗಿ ಉಪ್ಪಲ್ ಜಂಕ್ಷನ್ ನಲ್ಲಿ ಸ್ಕೈವಾಕರ್ ನಿರ್ಮಾಣಗೊಂಡಿದ್ದು, ಇಂದು ಬೆಳಿಗ್ಗೆ 11ಕ್ಕೆ ಐಟಿ ಮತ್ತು ಪೌರಾಡಳಿತ ಸಚಿವ ಕೆ.ಟಿ. ರಾಮರಾವ್ ಉದ್ಘಾಟಿಸಿದ್ದಾರೆ. ಜನದಟ್ಟಣೆ ಪ್ರದೇಶವಾಗಿರುವ ಉಪ್ಪಲ್ ನಗರದಲ್ಲಿ ವಾಹನಗಳ ದಟ್ಟಣೆ ಕೂಡ ಹೆಚ್ಚಾಗಿದೆ. ಇದರಿಂದಾಗಿ ಪಾದಾಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಸದ್ಯ ಈ ಸ್ಕೈವಾಕರ್ ನಿರ್ಮಾಣಗೊಂಡಿದ್ದರಿಂದಾಗಿ ಪಾದಾಚಾರಿಗಳು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸುಲಭವಾಗಿ ಹೋಗುವಂತಾಗುತ್ತದೆ.
25 ಕೋಟಿ ರೂ. ವೆಚ್ಚದಲ್ಲಿ ಈ ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಉಪ್ಪಲ್, ಸಿಕಂದರಾಬಾದ್, ಎಲ್ ಬಿ ನಗರ, ರಾಮಂತಪುರ ಹಾಗೂ ಮೆಟ್ರೋ ನಿಲ್ದಾಣಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ನಾಲ್ಕು ಸ್ಥಳಗಳಿಂದ ನೇರವಾಗಿ ಮೆಟ್ರೋ ನಿಲ್ದಾಣ ತಲುಪಬಹುದು. ಇದರಿಂದಾಗಿ ವೃದ್ಧರು, ಗರ್ಭಿಣಿಯರಿಗೆ ತುಂಬಾ ಅನುಕೂಲವಾದಂತಾಗುತ್ತಿದೆ.








