ಸುರೇಶ್ ರೈನಾ ಕುಟುಂಬಕ್ಕೆ ನೆರವಾದ ರಿಯಲ್ ಹೀರೋ ಸೋನು ಸೂದ್
ಕೊರೊನಾ ಹಾವಳಿಯಿಂದಾಗಿ ಉಂಟಾಗಿರುವ ಸಂಕಷ್ಟದ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಆಪತ್ಬಾಂಧವನಂತೆ ಜನರ ಸಹಾಯಕ್ಕೆ ನಿಂತಿದ್ದಾರೆ. ಬಡವರಾಗಲಿ ಶ್ರೀಮಂತರಾಗಲಿ, ಸೆಲೆಬ್ರಟಿಗಳಾಗಲಿ ಜಾಗ ಯಾವುದೇ ಇರಲಿ ಕಷ್ಟದಲ್ಲಿರುವವರಿಗೆ ಸಹಾಯಕ್ಕೆ ಸದಾ ಮುಂದಿದ್ದಾರೆ ಸೋನು..
ಇದೀಗ ಆಕ್ಸಿಜನ್ ಸಿಗದೆ ಪರದಾಡುತ್ತಿದ್ದ ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದಾರೆ. ಸುರೇಶ್ ರೈನಾ ಚಿಕ್ಕಮ್ಮ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ರೈನಾ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್ ಸಿಗದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಬಗ್ಗೆ ಸುರೇಶ್ ರೈನಾ ಟ್ವಿಟ್ಟರ್ ಮೂಲಕ ಸಿಎಂ ಯೋಗಿ ಆದಿತ್ಯನಾಥ್ಗೆ ಸಹಾಯ ಕೋರಿದ್ದಾರೆ.
ಆದರೆ ಆದಿತ್ಯನಾಥ್ ಸಹಾಯಕ್ಕೆ ಧಾವಿಸಿಲ್ಲ. ಮೀರತ್ ನಲ್ಲಿರುವ 65 ವರ್ಷದ ಸುರೇಶ್ ರೈನಾ ಚಿಕ್ಕಮ್ಮನ ಸಹಾಯಕ್ಕೆ ನಟ ಸೋನು ಸೂದ್ ನೆರವಾಗಿದ್ದಾರೆ. ತಕ್ಷಣ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ ಸೋನು ಸೂದ್ ವಿಳಾಸ ನೀಡುವಂತೆ ಕೇಳಿಕೊಂಡಿದ್ದಾರೆ. ’10 ನಿಮಿಷದಲ್ಲೇ ಸಿಲಿಂಡರ್ ತಲುಪಲಿದೆ ಸಹೋದರ’ ಎಂದು ಸೋನು ಸೂದ್ ಹೇಳಿದ್ದಾರೆ. ಮಾತಿನಂತೆ 10 ನಿಮಿಷದಲ್ಲಿ ರೈನಾಗೆ ಸಿಲಿಂಡರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.
ದೇಶದಲ್ಲಿ ಕೊರೊನಾ ಹೆಮ್ಮಾರಿಯಿಂದ ನಿತ್ಯ ಸಾವಿರಾರು ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಮಾಲಿವುಡ್ , ಟಾಲಿವುಡ್ ಸೇರಿ ಸಿನಿಮಾರಂಗದವರು, ಸೆಲೆಬ್ರಿಟಿಗಳು ತಾರೆಯರು ಕೂಡ ಮಹಾಮಾರಿಗೆ ಬಲಿಯಾಗಿದ್ದಾರೆ.
ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಜನರು ಕೈಜೋಡಿಸಬೇಕಾಗಿದೆ. ಜನರು ಸುಖಾಸುಮ್ಮನೆ ಅನಗತ್ಯವಾಗಿ ಹೊರಗಡೆ ಓಡಾಡದೇ , ಗುಂಪಿನಲ್ಲಿ ಬೆರೆಯದೇ , ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ.