ದೇಸಿ ಕ್ರಿಕೆಟಿಗರ ಕಡೆ ಗಮನ ಹರಿಸಿ ಬಿಗ್ ಬಾಸ್…!
ಟೀಮ್ ಇಂಡಿಯಾದ ಮಾಜಿ ನಾಯಕ, ಸಹ ಆಟಗಾರರ ನೆಚ್ಚಿನ ದಾದಾ, ಬಿಗ್ ಬಾಸ್ ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ.
ಹೌದು, ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದಾಗ ಭಾರತೀಯ ಕ್ರಿಕೆಟ್ ನಲ್ಲಿ ದಾದಾ ಗಿರಿ ಶುರುವಾಗುತ್ತದೆ ಅಂತ ಎಲ್ಲರೂ ಅಂದುಕೊಂಡಿದ್ದರು. ಅಲ್ಲದೆ ದೇಶಿ ಕ್ರಿಕೆಟ್ ಅನ್ನು ಅಭಿವೃದ್ದಿಪಡಿಸುವ ಭರವಸೆಯನ್ನೂ ನೀಡಿದ್ದರು. ಆದ್ರೆ ಮಹಾಮಾರಿ ಕೋವಿಡ್ ಸೌರವ್ ಗಂಗೂಲಿ ಅವರ ಕನಸಿಗೆ ಅಡ್ಡಿಯನ್ನುಂಟು ಮಾಡಿತ್ತು.
ಅದೇನೇ ಇರಲಿ, ಸೌರವ್ ಗಂಗೂಲಿ ಈಗ ದೇಶಿ ಕ್ರಿಕೆಟ್ ಮತ್ತು ದೇಶಿ ಕ್ರಿಕೆಟ್ ಆಟಗಾರರನ್ನು ಮರೆತಂತೆ ಕಾಣುತ್ತಿದೆ. ಸೌರವ್ ಗಂಗೂಲಿ ಅವರಿಗೆ ಟೀಮ್ ಇಂಡಿಯಾ ಮತ್ತು ಐಪಿಎಲ್ ಬಿಟ್ರೆ ಬೇರೆ ಕಡೆ ಗಮನ ಹರಿಸಿದಂತೆ ಕಾಣುತ್ತಿಲ್ಲ.
ನಿಜ, ಮಹಾ ಮಾರಿ ಕೋವಿಡ್ ನಿಂದಾಗಿ ದೇಶಿ ಟೂರ್ನಿಗಳಾದ ರಣಜಿ ಟೂರ್ನಿ ಕಳೆದ ಎರಡು ವರ್ಷದಿಂದ ರದ್ದುಗೊಂಡಿದೆ. ವಿಜಯ ಹಜಾರೆ ಮತ್ತು ಸಯ್ಯದ್ ಮುಷ್ತಾಕ್ ಆಲಿ ಟೂರ್ನಿಯನ್ನು ಕಳೆದ ಬಾರಿ ಕಷ್ಟಪಟ್ಟು ಆಯೋಜನೆ ಮಾಡಲಾಗಿತ್ತು. ಈ ವರ್ಷ ಆಡಿಸುವ ಬಗ್ಗೆ ಇನ್ನೂ ಬಿಸಿಸಿಐ ಚರ್ಚೆ ನಡೆಸಿಲ್ಲ.
ಈ ನಡುವೆ, ದೇಸಿ ಕ್ರಿಕೆಟಿಗರ ಪರಿಸ್ಥಿತಿ ತೀರಾ ಚಿಂತಜನಕವಾಗಿದೆ. ಕ್ರಿಕೆಟ್ ಆಟವನ್ನೇ ನಂಬಿಕೊಂಡಿರುವ ಹಲವಾರು ಕ್ರಿಕೆಟಿಗರು ನಮ್ಮಲ್ಲಿದ್ದಾರೆ. ಅಲ್ಲದೆ ಬಿಸಿಸಿಐ ಕಳೆದ ವರ್ಷ ರಣಜಿ ಆಟಗಾರರಿಗೆ ಪರಿಹಾರ ಹಣ ಘೋಷಣೆ ಮಾಡಿತ್ತು. ಆದ್ರೆ ಆ ದುಡ್ಡು ಇನ್ನೂ ಆಟಗಾರರ ಕೈ ಸೇರಿಲ್ಲ.
ಸಾಮಾನ್ಯವಾಗಿ ಒಂದು ರಣಜಿ ಪಂದ್ಯಕ್ಕೆ ಪ್ರತಿ ಆಟಗಾರರಿಗೆ 1ಲಕ್ಷ 40 ಸಾವಿರ ವೇತನವನ್ನು ಫಿಕ್ಸ್ ಮಾಡಿತ್ತು. ಅಂದಾಜು ವರ್ಷಕ್ಕೆ 12 ಲಕ್ಷ ರೂಪಾಯಿ ಸಂಭಾವಣೆಯನ್ನು ಕೂಡ ರಣಜಿ ಆಟಗಾರರು ಪಡೆಯುತ್ತಿದ್ದರು.. ಆದ್ರೆ ಕಳೆದ ವರ್ಷದ ಹಣವೇ ಇನ್ನೂ ಬಂದಿಲ್ಲ.
ಹೀಗಾಗಿ ದೇಸಿ ಕ್ರಿಕೆಟಿಗರು ಸಂಕಷ್ಟದಲ್ಲಿದ್ದಾರೆ. ಕೆಲವು ಅದೃಷ್ಟವಂತ ದೇಸಿ ಕ್ರಿಕೆಟಿಗರು ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಆದ್ರೆ ಇನ್ನುಳಿದ ಆಟಗಾರರು ಮನೆಯಲ್ಲೇ ಕೂರಬೇಕಾದ ಪರಿಸ್ಥಿತಿ ಬಂದಿದೆ..
ಬಿಸಿಸಿಐ ದೇಸಿ ಆಟಗಾರರನ್ನು ಕಡೆಗಣಿಸುತ್ತಿದೆ. ಇತ್ತೀಚೆಗೆ ನಡೆದ ಬಿಸಿಸಿಐ ಸಭೆಯಲ್ಲೂ ದೇಸಿ ಕ್ರಿಕೆಟ್ ಮತ್ತು ಕ್ರಿಕೆಟಿಗರ ಬಗ್ಗೆ ಚರ್ಚೆ ಕೂಡ ಮಾಡಿಲ್ಲ. ಕೇವಲ ಅಂತಾರಾಷ್ಟ್ರೀಯ ಟೂರ್ನಿ ಮತ್ತು ಐಪಿಎಲ್ ಬಗ್ಗೆ ಹೆಚ್ಚು ಚಿಂತೆ ಮತ್ತು ಸಮಾಲೋಚನೆ ಮಾಡುತ್ತಿದೆ.
ಒಟ್ಟಿನಲ್ಲಿ ಕ್ರಿಕೆಟಿಗರೇ ಕ್ರಿಕೆಟ್ ಸಂಸ್ಥೆಯ ಆಡಳಿತ ನಡೆಸಬೇಕೋ ಅನ್ನೋ ಸಿದ್ಧಾಂತ ಬಂದ್ರೂ ಕೂಡ ಕ್ರಿಕೆಟಿಗರ ನೆರವಿಗೆ ಬಾರದೇ ಇರೋದು ಅಚ್ಚರಿಯನ್ನುಂಟು ಮಾಡುತ್ತಿದೆ.
ಬಿಸಿಸಿಐಗೆ ದುಡ್ಡು ಮಾಡಬೇಕೋ.. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಬೇಕು.. ಕ್ರಿಕೆಟ್ ಜಗತ್ತನ್ನು ಕೈಯಲ್ಲೇ ಆಡಿಸಬೇಕು ಅನ್ನೋದು ಬಿಟ್ರೆ ದೇಸಿ ಕ್ರಿಕೆಟಿಗರ ಬಗ್ಗೆ ಸ್ವಲ್ಪನೂ ಯೋಚನೆ ಮಾಡದಿರುವುದು ವಿಪರ್ಯಾಸವೇ ಸರಿ.
ಅದ್ರಲ್ಲೂ ಟೀಮ್ ಇಂಡಿಯಾದ ಗ್ರೇಟ್ ಕ್ಯಾಪ್ಟನ್ ಆಗಿದ್ದ ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ಬಿಸಿಸಿಐ ದೇಸಿ ಕ್ರಿಕೆಟಿಗರನ್ನು ಕಡೆಗಣಿಸುತ್ತಿರುವುದು ಅಚ್ಚರಿಯಾಗುತ್ತಿದೆ.