ನವದೆಹಲಿ : ಸ್ವಚ್ಛತೆಯ ವಾರ್ಷಿಕ ಸಮೀಕ್ಷೆಯ ಸ್ವಚ್ ಸರ್ವೇಕ್ಷನ್ 2020ರ ಫಲಿತಾಂಶ ಪ್ರಕಟವಾಗಿದ್ದು, ಸತತ 4ನೇ ವರ್ಷವೂ ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ‘ಸ್ವಚ್ಛ ಸರ್ವೇಕ್ಷಣ-2020’ರ ವರದಿಯನ್ನ ಇಂದು ಬಿಡುಗಡೆಯಾಗಿದೆ. ಇದರಲ್ಲಿ ಇಂದೋರ್ ದೇಶದ ನಂ.1 ಸ್ವಚ್ಛ ನಗರ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಸೂರತ್ ಮತ್ತು ನವಿ ಮುಂಬಯಿ ಗಳಿವೆ.
ಶ್ರೇಣಿ ವ್ಯವಸ್ಥೆಯಲ್ಲಿ ರಾಷ್ಟ್ರಮಟ್ಟ, ರಾಜ್ಯಮಟ್ಟ, ವಲಯ ಮಟ್ಟದ ಶ್ರೇಣಿಗಳನ್ನು ಸರ್ಕಾರ ಘೋಷಿಸಿದೆ. ಇದರಂತೆ, ಹತ್ತು ಲಕ್ಷ ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳ ರಾಷ್ಟ್ರಮಟ್ಟದ ಶ್ರೇಣಿಯ ಟಾಪ್ 10 ರ ಪಟ್ಟಿಯಲ್ಲಿ ಗುಜರಾತ್ ನ ಸೂರತ್(2), ಅಹಮದಾಬಾದ್(5), ರಾಜ್ ಕೋಟ್(6) ವಡೋದರಾ (10) ನಗರಗಳಿವೆ. ಈ ಪಟ್ಟಿಯಲ್ಲಿ ಬೆಂಗಳೂರು 37ನೇ ಸ್ಥಾನದಲ್ಲಿದೆ.
ಇದೇ ರೀತಿ, ಒಂದು ಲಕ್ಷದಿಂದ 10 ಲಕ್ಷ ಜನಸಂಖ್ಯೆಯ ನಗರಗಳ ಟಾಪ್ 10ರ ಪಟ್ಟಿಯಲ್ಲಿ ಛತ್ತೀಸ್ ಗಢದ ಅಂಬಿಕಾಪುರ ನಂ.1 ಸ್ಥಾನ. ಕರ್ನಾಟಕದ ಮೈಸೂರು ಎರಡನೇ ಸ್ಥಾನದಲ್ಲಿದೆ.