ಈ ಮ್ಯಾಚ್ ಒಂದು ರೀತಿಯಲ್ಲಿ ನಾಕೌಟ್ ಮ್ಯಾಚ್ ಇದ್ದ ಹಾಗೇ. ಸೋತವರು ಇನ್ನುಳಿದ 2 ಲೀಗ್ ಪಂದ್ಯಗಳನ್ನು ಸುಮ್ಮನೆ ಔಪಚಾರಿಕತೆಗಾಗಿ ಆಡಬೇಕು.
ಗೆದ್ದವರು ಟೂರ್ನಿಯಲ್ಲಿ ಉಳಿಯಬಹುದು ಅನ್ನುವ ಆಸೆ ಹುಟ್ಟುತ್ತದೆ ಹೊರತು ಸೆಮಿಫೈನಲ್ ಸ್ಥಾನ ಗ್ಯಾರೆಂಟಿ ಅಲ್ಲ.
ಹೀಗಾಗಿ ಗ್ರೂಪ್ ಆಫ್ ಡೆತ್ ಅಂತಲೇ ಕರೆಸಿಕೊಳ್ಳುವ ಗ್ರೂಪ್ 1ರ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಕುತೂಹಲ ಕೆರಳಿಸಿದೆ.
ಶಾರ್ಜಾದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ವೆಸ್ಟ್ಇಂಡೀಸ್ನ ಬಿಗ್ ಹಿಟ್ಟರ್ಗಳಿಗೆ ಲಾಭವಿದೆ. ಆದರೆ ಕೆರಿಬಿಯನ್ನರು ತಮ್ಮ ಟಚ್ ಅನ್ನು ಕಂಡುಕೊಳ್ತಾರಾ ಅನ್ನುವ ಸಂಶಯವಿದೆ.
ಬ್ಯಾಟಿಂಗ್ನಲ್ಲಿ ವಿಂಡೀಸ್ ಸಿಕ್ಕಾಪಟ್ಟೆ ಪವರ್ಪುಲ್. ಎವಿನ್ ಲೆವಿಸ್, ಕ್ರಿಸ್ಗೇಲ್, ನಿಕೊಲಸ್ ಪೂರನ್, ಆ್ಯಂಡ್ರೆ ರಸೆಲ್, ಕಿರಾನ್ ಪೊಲ್ಲಾರ್ಡ್, ಡ್ವೈನ್ ಬ್ರಾವೋ ಹೀಗೇ ಸಿಕ್ಸ್ ಹಿಟ್ಟರ್ಗಳ ದಂಡೇ ಇದೆ. ಆದರೆ ಬೌಲಿಂಗ್ನಲ್ಲಿ ಹೇಳಿಕೊಳ್ಳುವಂತಹ ಪವರ್ ಇಲ್ಲ. ರವಿರಾಂ ಪಾಲ್ ಮತ್ತು ಡ್ವೈನ್ ಬ್ರಾವೋ ಮಾತ್ರ ಎದುರಾಳಿಯನ್ನು ಕಟ್ಟಿಹಾಕಬಲ್ಲರು.
ಇನ್ನು ಬಾಂಗ್ಲಾದೇಶ ನಾಜೂಕಿನ ಪ್ರದರ್ಶನ ನೀಡಬೇಕಿದೆ. ಬ್ಯಾಟಿಂಗ್ನಲ್ಲಿ ಲಿಟನ್ ದಾಸ್ ಮತ್ತು ನಯಿಮ್ ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಶಕೀಬ್ ಅಲ್ ಹಸನ್, ರಹೀಂ ಮತ್ತು ಮೊಹಮ್ಮದುಲ್ಲಾ ಉಳಿದ ಕೆಲಸ ಮುಗಿಸಬಲ್ಲರು. ಬೌಲಿಂಗ್ನಲ್ಲೂ ಶಕೀಬ್ ಆಟವೇ ಹೆಚ್ಚು ಪ್ರಾಮುಕ್ಯತೆ ಪಡೆದುಕೊಂಡಿದೆ.
ಶಾರ್ಜಾದಲ್ಲಿ ಆಡಿರುವ ಪಂದ್ಯಗಳಲ್ಲಿ ಇಲ್ಲಿ ತನಕ ಬಿಗ್ ಸ್ಕೋರ್ ಬಂದಿದೆ. ಆದರೆ ವಿಕೆಟ್ ಪಂದ್ಯ ಸಾಗಿದಂತೆ ನಿಧಾನವಾಗುತ್ತಾ ಹೋಗುತ್ತಿದೆ. ಹೀಗಾಗಿ ಇಲ್ಲಿ ಟಾಸ್ ಗೆಲ್ಲುವ ಅದೃಷ್ಟವೂ ಇರಬೇಕಾಗುತ್ತದೆ. ಒಟ್ಟಿನಲ್ಲಿ ಬಾಂಗ್ಲಾದೇಶ ಮತ್ತು ವೆಸ್ಟ್ಇಂಡೀಸ್ ತಂಡಗಳಿಗೆ ಈ ಪಂದ್ಯ ವರ್ಚುವಲ್ ನಾಕೌಟ್ ಇದ್ದ ಹಾಗೇಯೇ..!