ತಮಿಳುನಾಡಲ್ಲಿ ಮತ್ತೆ ಕೊರೊನಾ ಏರಿಕೆ… ಲಾಕ್ ಡೌನ್ ಮುಂದುವರಿಕೆ..!
ಚೆನ್ನೈ: ಒಂದೆಡೆ ದೇಶಾದ್ಯಾಂತ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ.. ಕೇರಳದಲ್ಲಿ ರಕ್ಕಸ ರೂಪ ಪಡೆದುಕೊಂಡಿದೆ.. ಇನ್ನೂ ಕೆಲ ರಾಜ್ಯಗಳಲ್ಲಿ ನಿಧಾನಕ್ಕೆ ವೇಗ ಪಡೆದುಕೊಳ್ತಿದೆ.. ಈ ನಡುವೆ ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತಮಿಳುನಾಡು ಸರ್ಕಾರ ಆಗಸ್ಟ್ 9ರವರೆಗೆ ಲಾಕ್‍ಡೌನ್ ಮುಂದುವರಿಸಿದೆ.
ಹಿಂದಿನ ಆದೇಶಕ್ಕೆ ಅನುಗುಣವಾಗಿ ಲಾಕ್‍ಡೌನ್ ಜಾರಿಯಲ್ಲಿರಲಿದೆ. ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಕಳೆದ ಎರಡು ತಿಂಗಳಿನಿಂದ ತಮಿಳುನಾಡಿನ 31 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿದೆ. ಆದರೆ ಎರಡು-ಮೂರು ದಿನಗಳಿಂದ ಈ ಸಂಖ್ಯೆ ಏಕಾಏಕಿ ಏರಿಕೆಯಾಗುತ್ತಿದೆ.
ಕಳೆದ ಬುಧವಾರ 1,756, ಗುರುವಾರ 1859, ಶುಕ್ರವಾರ 1,947 ಪ್ರಕರಣಗಳು ಪತ್ತೆಯಾಗಿದೆ. ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕ್ರಮವನ್ನು ತಮಿಳುನಾಡು ಸರ್ಕಾರ ಮುಂದುವರಿಸಿದೆ.