ಭೋಪಾಲ್: ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪತ್ತೆ ಹಚ್ಚಲು ಮಧ್ಯಪ್ರದೇಶದ (Madhya Pradesh) ಹರ್ದಾ ಜಿಲ್ಲೆಯ ಪೊಲೀಸರು (Police) ನೈಟ್ ವಿಷನ್ ಡ್ರೋನ್ (Night Vision Drone) ಬಳಸಿದ್ದಾರೆ.
ಥರ್ಮಲ್ ಇಮೇಜ್ ಕ್ಯಾಮೆರಾ ಹೊಂದಿರುವ ಡ್ರೋನ್‍ನ್ನು ಭೋಪಾಲ್ ಮೂಲದ ಮಧ್ಯಪ್ರದೇಶ ಎಲೆಕ್ಟ್ರಾನಿಕ್ ಡೆವಲಪ್ ಮೆಂಟ್ ಕಾರ್ಪೋರೇಷನ್ ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದಿತ್ಯ ಸಿಂಗ್ ಹೇಳಿದ್ದಾರೆ.
ಡ್ರೋನ್ ಉಷ್ಣ ಸಂವೇದಕಗಳನ್ನು ಹೊಂದಿದೆ. ಸಾಮಾನ್ಯ ಮಾನವನ ದೇಹದ ಉಷ್ಣತೆಯನ್ನು ಇದು ಗ್ರಹಿಸುತ್ತದೆ. ಹೀಗಾಗಿ ಇದರಿಂದಾಗಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅಡಗಿರುವವರನ್ನು ಕಂಡು ಹಿಡಿಯುವುದು ಸುಲಭ ಎಂದು ಹೇಳಿದ್ದಾರೆ.
ಆರೋಪಿಗಾಗಿ ಪೊಲೀಸರು ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿ ಮಾತ್ರ ಪತ್ತೆಯಾಗಿಲ್ಲ. ಹೀಗಾಗಿ ಅಧಿಕಾರಿಗಳು ಡ್ರೋನ್ ಕ್ಯಾಮೆರಾ ಬಳಸಲು ಮುಂದಾಗಿದ್ದಾರೆ. ಆರೋಪಿಯು ಹರ್ದಾದಿಂದ 50 ಕಿಮೀ ದೂರದ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸುಮಾರು 24 ವರ್ಷದ ಆರೋಪಿ ಬಾಲಕಿಗೆ ತಿಂಡಿ ನೀಡಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.








